ಕೌಟುಂಬಿಕ ಕಲಹ ಹಿನ್ನೆಲೆ: ಪತ್ನಿಯನ್ನು ಹತ್ಯೆಗೈದು ಹೊಲದಲ್ಲಿ ಹೂತಿಟ್ಟ ಪತಿ
ಆರೋಪಿಯ ಬಂಧನ
ಬೆಂಗಳೂರು, ಆ.18: ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಹತ್ಯೆಗೈದು ತನ್ನ ಹೊಲದಲ್ಲಿಯೇ ಹೂತಿಟ್ಟ ಪ್ರಕರಣವೊಂದನ್ನು ಕೊತ್ತನೂರು ಠಾಣಾ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊತ್ತನೂರಿನ ದುರ್ಗಾ ಪರಮೇಶ್ವರಿ ಲೇಔಟ್ನ ಶಿಲ್ಪಾ(21) ಎಂಬಾಕೆ ಕೊಲೆಯಾದ ಮಹಿಳೆಯಾಗಿದ್ದು, ಈಕೆಯ ಪತಿ ಕಲ್ಲೇಶ್ (31), ಆತನ ಅಣ್ಣ ಕೃಷ್ಣಪ್ಪ (33) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಮೂಲದ ಶಿಲ್ಪಾ ಅವರನ್ನು ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಕಲ್ಲೇಶ್, ದುರ್ಗಾಪರಮೇಶ್ವರಿ ಲೇಔಟ್ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದ. ವಿವಾಹವಾದ ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ವಯಸ್ಸಿನ ಅಂತರದಿಂದಾಗಿ ಕೆಲ ತಿಂಗಳ ಹಿಂದಿನಿಂದ ಆಗಾಗ್ಗೆ ಜಗಳವುಂಟಾಗುತ್ತಿತ್ತು ಎನ್ನಲಾಗಿದೆ.
ವಿದ್ಯಾವಂತೆಯಾಗಿದ್ದ ಶಿಲ್ಪಾ ತಾನು ಕೆಲಸಕ್ಕೆ ಹೋಗುವುದಾಗಿ ಪಟ್ಟು ಹಿಡಿದಿದ್ದು, ಆದರೆ ಇದಕ್ಕೆ ಕಲ್ಲೇಶ್ ಒಪ್ಪಿರಲಿಲ್ಲ. ಇದೇ ವಿಚಾರವಾಗಿ ಆ.12ರಂದು ಜಗಳ ವಿಕೋಪಕ್ಕೆ ತಿರುಗಿದ್ದು, ಅಕ್ಕ-ಪಕ್ಕದವರು ಸುಮ್ಮನಿರಿಸಿದ್ದಾರೆ. ಬಳಿಕ, ಮಧ್ಯರಾತಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ವಾಹನವೊಂದರಲ್ಲಿ ಹಾಕಿಕೊಂಡು ಅಂಜನಪ್ಪ ಲೇಔಟ್ನಲ್ಲಿದ್ದ ಸಹೋದರ ಕೃಷ್ಣಪ್ಪ ಸಹಾಯದೊಂದಿಗೆ ಕೊತ್ತನೂರು ಹೊರ ವಲಯದ ಜಮೀನೊಂದರಲ್ಲಿ ಗುಂಡಿ ತೋಡಿ ಹೂತು ಹಾಕಿ ಸುಮ್ಮನಾಗಿದ್ದ ಎನ್ನಲಾಗಿದೆ.
ಶಿಲ್ಪಾ ಅವರ ತಾಯಿ ಪಾರ್ಶ್ವವಾಯು ಪೀಡಿತರಾಗಿದ್ದು, ಅಕ್ಕ ಹಾಗೂ ಚಿಕ್ಕಮ್ಮನಿಗೆ ಪತ್ನಿ ಶಿಲ್ಪಾ ಕಾಣೆಯಾಗಿರುವುದಾಗಿ ತಿಳಿಸಿದ್ದಾನೆ. ಪತಿಯೊಂದಿಗಿನ ಜಗಳದಿಂದ ಶಿಲ್ಪಾ ಮನೆ ಬಿಟ್ಟು ಹೋಗುವುದು ಸಾಮಾನ್ಯವಾಗಿದ್ದರಿಂದ ಅವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ, ಪೊಲೀಸ್ ಠಾಣೆಗೆ ದೂರು ಕೊಡುವಂತೆ ಹೇಳಿದ್ದಾರೆ. ಅದನ್ನು ಕೇಳಿ ದೂರು ಕೂಡಲು ಕಲ್ಲೇಶ್ ಮುಂದಾದನಾದರೂ ಧೈರ್ಯ ಸಾಲದೆ ಸುಮ್ಮನಾಗಿದ್ದ. ಶಿಲ್ಪಾ ಕಾಣೆಯಾಗಿ 5 ದಿನ ಕಳೆದರೂ ಪತ್ತೆಯಿಲ್ಲದಿದ್ದರಿಂದ ಅಕ್ಕ ಹಾಗೂ ಚಿಕ್ಕಮ್ಮ ಕೂಡ್ಲಗಿಯಿಂದ ಕೊತ್ತನೂರಿಗೆ ಬಂದು ನೋಡಿದಾಗ ಶಿಲ್ಪಾ ಪತ್ತೆಯಿರಲಿಲ್ಲ. ಪತಿ ಕಲ್ಲೇಶ್ನನ್ನು ವಿಚಾರಿಸಿ ಆತ ಕಾಣೆಯಾಗಿರುವುದಾಗಿ ಮತ್ತೆ ಹೇಳಿದಾಗ ಎಲ್ಲರೂ ಸೇರಿ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದೂರು ದಾಖಲಿಸಿಕೊಂಡ ಕೊತ್ತನೂರು ಠಾಣಾ ಪೊಲೀಸರು ಅನುಮಾನದ ಮೇಲೆ ಕಲ್ಲೇಶ್ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ. ಕೂಡಲೇ ಆತ ಹಾಗೂ ಕೃತ್ಯಕ್ಕೆ ಸಹಕರಿಸಿದ ಆತನ ಸಹೋದರ ಕೃಷ್ಣಪ್ಪನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.