ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ತೆರೆ
4 ಲಕ್ಷಕ್ಕೂ ಅಧಿಕ ಜನರ ಭೇಟಿ
ಬೆಂಗಳೂರು, ಆ.18: ನಗರದ ಸಸ್ಯಕಾಶಿಯಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ರವಿವಾರ ಅದ್ಧೂರಿ ತೆರೆ ಕಂಡಿದ್ದು, ಲಕ್ಷಾಂತರ ಜನರು ಲಾಲ್‌ಬಾಗ್‌ಗೆ ಭೇಟಿ ನೀಡಿ, ಹೂಗಳ ಅಂದವನ್ನು ಕಣ್ತುಂಬಿಕೊಂಡಿದ್ದಾರೆ.
ಆ.9 ರಿಂದ ಆರಂಭವಾಗಿದ್ದ ಫಲಪುಷ್ಪ ಪ್ರದರ್ಶನವಿಂದು ಕೊನೆಯ ದಿನವಾಗಿದ್ದರಿಂದ ಸಾವಿರಾರು ಜನರು ಲಾಲ್‌ಬಾಗ್‌ಗೆ ಭೇಟಿ ನೀಡಿದ್ದರು. ಮೈಸೂರು ಸಂಸ್ಥಾನದ 25 ನೆ ಹಾಗೂ ಕೊನೆಯ ಅರಸ ಜಯಚಾಮರಾಜ ಒಡೆಯರ್ ಜನ್ಮಶತಮಾನೋತ್ಸವ ವಿಶೇಷದ 210 ನೇ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ನಿರಂತರ ಮಳೆಯ ನಡುವೆಯೂ ಎಲ್ಲಾ ದಿನಗಳಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸಿದ್ದರು. ಗಾಜಿನ ಮನೆಯ ದ್ವಾರದಲ್ಲಿ ಜನ ಸಾಲುಗಟ್ಟಿ ಆಗಮಿಸಿದ್ದರು. ಲಕ್ಷಾಂತರ ಹೂವುಗಳನ್ನು ಬಳಿಸಿ ಒಡೆಯರ್ ಪುತ್ಥಳಿಗಳು, ಮೈಸೂರು ಜಯಚಾಮರಾಜೇಂದ್ರ ವೃತ್ತ, ಸಿಂಹಾಸನ, ಆನೆಗಳು, ದರ್ಬಾರ್ ಹಾಲ್, ಸಂಗೀತ ವಾದ್ಯಗಳನ್ನು ಸೇರಿದಂತೆ ವಿವಿಧ ಪ್ರತಿಕೃತಿಗಳನ್ನು ಕಂಡು ಪುಳುಕಿತಗೊಂಡರು.
ಶಾಲಾ ಮಕ್ಕಳು ಸೇರಿದಂತೆ ಪ್ರೇಕ್ಷಕರಿಗೆ ನಾನಾ ತಳಿಗಳ ಹೂಗಳು, ತೋಟಗಾರಿಕೆ ಬೇಸಾಯ ಕುರಿತು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘದ ಸಿಬ್ಬಂದಿ ವರ್ಗದವರು ಮಾಹಿತಿ ನೀಡಿದರು.
ಅಂದಿನ ಕಾಲದಲ್ಲಿ ಜಯಚಾಮರಾಜ ಒಡೆಯರ್ ನೀರಾವರಿ ಯೋಜನೆ, ವಿದ್ಯುತ್ ಕ್ಷೇತ್ರಕ್ಕೆ ಕೊಡುಗೆ, ಪಂಚವಾರ್ಷಿಕ ಯೋಜನೆ, ಬೆಂಗಳೂರು ನಗರಕ್ಕೆ ಸಂಬಂಧಿಸಿದ ಅಭಿವೃದ್ಧಿ ಮಾಹಿತಿಯನ್ನು ಹೂವಿನ ಮಾದರಿಯಲ್ಲಿ ಪ್ರದರ್ಶಿಸಲಾಗಿದೆ. ಅಲ್ಲದೆ, ಮೈಸೂರಿನ ಪ್ರಾಣಿ ಸಂಗ್ರಹಾಲಯ ಮಾದರಿ, ಜಯಚಾಮರಾಜ ಒಡೆಯರ್ ಅವರ ಬಾಲ್ಯ, ವಿದ್ಯಾಭ್ಯಾಸ, ಮದುವೆ, ದಸರಾ ಮೆರವಣಿಗೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಛಾಯಾಚಿತ್ರಗಳು, ಆರು ಹೂವಿನ ಪಿರಮಿಡ್ ಮೇಲೆ ಒಡೆಯರ್ ಚಿತ್ರಣ ಪ್ರದರ್ಶನಗಳು ಪ್ಷೇಕ್ಷಕರನ್ನು ಅತಿಹೆಚ್ಚು ಸೆಳೆದಿವೆ.
ಕೊನೆಯ ದಿನವಾದ ರವಿವಾರ ಲಪುಷ್ಪ ಪ್ರದರ್ಶನ ವೀಕ್ಷಣೆಗೆ ಜನಸಾಗರ ಹರಿದು ಬಂದಿತ್ತು. ಜನರ ಆಗಮನಕ್ಕೆ ತಕ್ಕಂತೆ ಉದ್ಯಾನದಲ್ಲಿ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ಕಾರ್ಯಕರ್ತರು ವಹಿಸಿದ್ದರು. ಹೀಗಾಗಿ ತ್ಯಾಜ್ಯದ ಸಮಸ್ಯೆ ಹೆಚ್ಚಾಗಿ ಕಂಡುಬರಲಿಲ್ಲ. ಆದರೆ ತಿಂಡಿ ಮಾರಾಟಗಾರರನ್ನು ಹತ್ತಿಕ್ಕಲಾಗದೆ ಎಲ್ಲೆಲ್ಲೂ ಅವರು ಕಾಣುತ್ತಿದ್ದರು.
ವಾಹನ ಸವಾರರ ಪರದಾಟ: ಹಾಪ್‌ಕಾಮ್ಸ್ ಪ್ರಧಾನ ಕಚೇರಿ ಆವರಣ, ಡಬ್ಬಲ್ ರೋಡ್ ಗೇಟ್ ಸಮೀಪದಲ್ಲಿರುವ ನರ್ಸರಿ ಆವರಣಗಳಲ್ಲಿ ವಾಹನಗಳಿಗೆ ಶುಲ್ಕ ಪಡೆದು ನಿಲುಗಡೆಗೆ ವಿಶೇಷವಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದಲ್ಲದೆ ಶಾಂತಿನಗರ ಬಸ್ ನಿಲ್ದಾಣ, ಜೆ.ಸಿ. ರಸ್ತೆಯಲ್ಲಿರುವ ಬಿಬಿಎಂಪಿ ವಾಣಿಜ್ಯ ಸಂಕೀರ್ಣಗಳಲ್ಲೂ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಆದಾಗ್ಯೂ ಬಹುತೇಕ ವಾಹನ ಸವಾರರು ಉದ್ಯಾನದ ಸುತ್ತಲಿನ ರಸ್ತೆಯಂಚುಗಳಲ್ಲೇ ವಾಹನಗಳನ್ನು ನಿಲ್ಲಿಸಿದ್ದರು. ಇದರಿಂದ ಲಾಲ್‌ಬಾಗ್ ಸುತ್ತಮುತ್ತ ಮಧ್ಯಾಹ್ನದ ನಂತರ ಸಂಚಾರ ದಟ್ಟಣೆ ಉಂಟಾಗಿತ್ತು.
ಬಿಗಿ ಭದ್ರತೆ
ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಭೇಟಿ ನೀಡುವ ಲಾಲ್‌ಬಾಗ್‌ಗೂ ಬಿಗಿ ಭದ್ರತೆ ಒದಗಿಸಲಾಗಿತ್ತು. ಒಳ ಪ್ರವೇಶಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮೆಟಲ್ ಡಿಟೆಕ್ಟರ್‌ಗಳ ಮೂಲಕ ತಪಾಸಣೆ ನಡೆಸಲಾಗುತ್ತಿತ್ತು. ಪೊಲೀಸರು ಮಫ್ತಿ ಕಾರ್ಯಾಚಾರಣೆಯನ್ನೂ ನಡೆಸುತ್ತಿದ್ದರು.