ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ವಿಮಾನ ಖರೀದಿ ಪ್ರಕರಣ: ಚಿದಂಬರಂಗೆ ಈಡಿ ಸಮನ್ಸ್

ಹೊಸದಿಲ್ಲಿ, ಆ.19: ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಏರ್ ಇಂಡಿಯಾಗಾಗಿ 11 ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರಿಗೆ ವಿಚಾರಣೆಗಾಗಿ ಸಮನ್ಸ್ ಕಳುಹಿಸಿದೆ. ಒಂದು ದಶಕಕ್ಕೂ ಹಿಂದೆ ನಡೆಸಲಾದ ಈ ಖರೀದಿಯು ಏರ್ ಇಂಡಿಯಾದ ಏರಿಕೆಯಾದ ನಷ್ಟಗಳಿಗೆ ಕಾರಣವಾಯಿತು ಎಂದು ತನಿಖಾ ಏಜನ್ಸಿಗಳು ಹೇಳಿವೆ.
ಚಿದಂಬರಂ ಅವರ ವಿಚಾರಣೆ ಆಗಸ್ಟ್ 23ರಂದು ನಡೆಯಲಿದೆ. ಚಿದಂಬರಂ ಅವರ ನೇತೃತ್ವದ ಸಚಿವರ ಉನ್ನತಾಧಿಕಾರ ತಂಡವು ಈ ಖರೀದಿ ಪ್ರಕ್ರಿಯೆಗೆ ಹಸಿರು ನಿಶಾನೆ ನೀಡಿತ್ತು ಎಂದು ಅಂದಿನ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ವಿಚಾರಣೆ ವೇಳೆ ನೀಡಿರುವ ಮಾಹಿತಿಯ ಆಧಾರದಲ್ಲಿ ಚಿದಂಬರಂ ಅವರ ವಿಚಾರಣೆ ನಡೆಯಲಿದೆ.
2007ರಲ್ಲಿ ಸುಮಾರು 60,000 ಕೋಟಿ ರೂ. ವೆಚ್ಚದಲ್ಲಿ ಏರ್ ಬಸ್ನಿಂದ 48 ವಿಮಾನ ಹಾಗೂ ಬೋಯಿಂಗ್ನಿಂದ 68 ವಿಮಾನ ಖರೀದಿಸಿದ ಪ್ರಕರಣ ಇದಾಗಿದೆ. ಅಂದಿನ ಮನಮೋಹನ್ ಸಿಂಗ್ ಸರಕಾರ ಡಿಸೆಂಬರ್ 2005ರಲ್ಲಿ 68 ವಿಮಾನಗಳ ಖರೀದಿಗೆ ಒಪ್ಪಿಗೆ ನೀಡಿದ್ದರೆ ಒಂದು ವರ್ಷ ನಂತರ ಏರ್ ಬಸ್ ಎಸ್ಇಯಿಂದ 43 ವಿಮಾನಗಳ ಖರೀದಿಗೆ ಅನುಮತಿ ದೊರಕಿತ್ತು.