ರಾಮನಗರ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುವಂತೆ ಸಂಸದ ಡಿ.ಕೆ.ಸುರೇಶ್ ಸೂಚನೆ
ಬೆಂಗಳೂರು, ಆ.19: ಕ್ಷೇತ್ರದ ಯಾವುದೇ ಕೆಲಸಗಳ ಮಾಹಿತಿ ನೀಡಿದಲ್ಲಿ ಅದರ ಸಂಪೂರ್ಣ ಜವಾಬ್ದಾರಿಗಳನ್ನು ವಹಿಸಿ ಕೆಲಸಗಳನ್ನು ಮಾಡಲು ಸಿದ್ಧ, ಆದಷ್ಟು ಬೇಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ರಸ್ತೆ ಕಾಮಗಾರಿಗಳನ್ನು ಮುಗಿಸುವಂತೆ ಸಂಸದ ಡಿ.ಕೆ.ಸುರೇಶ್ ಸೂಚಿಸಿದರು.
ಆ.31ರಂದು ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆಯಲಿರುವ ರಾಮನಗರ ಪ್ರಾದೇಶಿಕ ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಕಾವೇರಿ ವನ್ಯಜೀವಿ ವಿಭಾಗಗಳಲ್ಲಿ ಬಾಕಿ ಇರುವ ಅರಣ್ಯ ಜಮೀನುಗಳ ಡಿ ನೋಟಿಫಿಕೇಷನ್ ಪ್ರಸ್ತಾವನೆಗಳ ಪ್ರಗತಿ ಹಾಗೂ ಇತರೆ ವಿಷಯಗಳ ಕುರಿತ ಸಭೆಗೆ ಸಂಬಂಧಿಸಿದಂತೆ ಇಂದು ರಾಮನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
209 ರಸ್ತೆ ಅಭಿವೃದ್ಧಿ ಕಾರ್ಯವು ಯಾರದೋ ವೈಯಕ್ತಿಕ ಯೋಜನೆಯಲ್ಲ, ಇದು ರಾಜ್ಯದ ಯೋಜನೆಯಾಗಿದೆ. ಆದುದರಿಂದ, ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸುರೇಶ್ ಹೇಳಿದರು.
ಮಳೆಗಾಲ ಶುರುವಾದ ಹಿನ್ನೆಲೆಯಲ್ಲಿ ಭೂಮಿಯು ತೇವಾಂಶವಾಗಿರುವುದರಿಂದ ರಸ್ತೆಗಳನ್ನು ಹಾಕಲು ಸಾಧ್ಯವಿಲ್ಲ. ಆದುದರಿಂದ, ಆದಷ್ಟು ಬೇಗನೆ ಅಂಡರ್‌ಪಾಸ್ ರಸ್ತೆ ಕಾಮಗಾರಿಗಳನ್ನು ಮುಗಿಸುವಂತೆ ಅವರು ತಿಳಿಸಿದರು.
ಎಸ್.ಟಿ.ಆರ್.ಆರ್ ರಸ್ತೆ ಹೊಸಕೋಟೆಯಿಂದ ನೇರವಾಗಿ ರಾಮನಗರ, ಚನ್ನಪಟ್ಟಣ, ಕನಕಪುರ, ಆನೇಕಲ್ ಮಾರ್ಗವಾಗಿ ಹೊಸೂರು ಸೇರಿಸುವಂತಹ ಸುಮಾರು 180 ಕಿ.ಮೀ ರಸ್ತೆ. ಇದು ಕೂಡ ಈಗ ಬೆಂಗಳೂರಿಗೆ ಪರ್ಯಾಯವಾಗುವಂತಹ ರಸ್ತೆ ಮಂಜೂರಾತಿಯಾಗಿ ಭೂಸ್ವಾಧೀನ ಕಾರ್ಯ ಪೂರ್ಣಗೊಂಡು ಅಂತಿಮ ಹಂತದಲ್ಲಿದೆ. ಇದಕ್ಕೆ ಬೇಕಾದಂತಹ ಮಾಹಿತಿಗಳನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆ ಡಾಂಬರೀಕರಣ ಕಾರ್ಯಕ್ಕೆ ಬಳಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆ ಮಾಡಿ ಎಂದು ಸುರೇಶ್ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 275 ಮತ್ತು 209ಗೆ ಸಂಬಂಧಿಸಿದಂತೆ ಭೂಸ್ವಾಧೀನ ಸಮಸ್ಯೆಗಳ ಬಗ್ಗೆ ಬಹಳಷ್ಟು ಕೆಲಸಗಳನ್ನು ನಡೆಯಲು ಸಮಸ್ಯೆಯಾಗಿತ್ತು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಶೀಘ್ರ ಪರಿಹಾರ ಕೈಗೊಂಡು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕನಕಪುರ, ಚಾಮರಾಜನಗರ ರಸ್ತೆ, ಬೆಂಗಳೂರಿನಿಂದ ನೈಸ್ ಜಂಕ್ಷನ್ ರಸ್ತೆಗೆ ಸಂಬಂಧಿಸಿದ ಸೋಮವಾರಪೇಟೆ, ಮಾಗಡಿ, ಕುಣಿಗಲ್ ಸೇರುವ ರಸ್ತೆಯನ್ನು ಕೆಪ್ ಯೋಜನೆಯಡಿ ಹಾಗೂ ಬಿಡದಿಯಿಂದ ನೇರವಾಗಿ ಹಾರೋಹಳ್ಳಿ ಮುಖಾಂತರ ಆನೇಕಲ್ ಸೇರಿ ಹೊಸಕೋಟೆ ಮುಖಾಂತರ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸೇರುವ ಕಾಮಗಾರಿ ಪ್ರಾರಂಭವಾಗಿದ್ದು ಇದಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ದಾಖಲಾತಿಗಳನ್ನು ಪರಿಶೀಲಿಸಿ, ಭೂಸ್ವಾಧೀನದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ ಕಾಮಗಾರಿಗಳನ್ನು ವೇಗವಾಗಿ ಕೈಗೆತ್ತಿಕೊಳ್ಳುವಂತೆ ಅವರು ಹೇಳಿದರು.
ರಾಮನಗರ ಪ್ರಾದೇಶಿಕ ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಕಾವೇರಿ ವನ್ಯಜೀವಿ ವಿಭಾಗಗಳಲ್ಲಿ ಸಿದ್ದರಬೆಟ್ಟ, ಹಂದಿಗುಂದಿ, ರಾಮದೇವರಬೆಟ್ಟ, ಬನ್ನೇರುಘಟ್ಟ ಮತ್ತಿತರ ಅರಣ್ಯ ಪ್ರದೇಶಗಳಲ್ಲಿ ಬಾಕಿ ಇರುವ ಅರಣ್ಯ ಜಮೀನುಗಳ ಡಿ ನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು