ಪತ್ನಿಯ ಮೇಯರ್ ಪಟ್ಟಕ್ಕಾಗಿ ಅನರ್ಹ ಶಾಸಕ ಮುನಿರತ್ನ ಲಾಬಿ ?

ಬೆಂಗಳೂರು, ಆ.20: ಬಿಬಿಎಂಪಿ ವ್ಯಾಪ್ತಿಯಲ್ಲಿನ ನಾಲ್ಕು ಶಾಸಕರು ಅನರ್ಹಗೊಂಡಿರುವುದು ಹಾಗೂ ಬದಲಾಗಿರುವ ರಾಜಕೀಯ ಪರಿಸ್ಥಿತಿಯಲ್ಲಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ತುದಿಗಾಲಿನಲ್ಲಿ ನಿಂತಿದೆ.
ಇದೇ ಸಂದರ್ಭವನ್ನು ಬಳಸಿಕೊಂಡು ಅನರ್ಹ ಶಾಸಕ ಮುನಿರತ್ನ ತಮ್ಮ ಪತ್ನಿಯನ್ನು ಮೇಯರ್ ಮಾಡಲು ಮುಂದಾಗಿದ್ದಾರೆ. ಸಚಿವ ಆರ್.ಅಶೋಕ್ರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ ಚರ್ಚೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಬಿಬಿಎಂಪಿಯ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಉಪ ಮೇಯರ್ ಭದ್ರೇಗೌಡ ಅವರ ಅಧಿಕಾರ ಅವಧಿ ಅಕ್ಟೋಬರ್ನಲ್ಲಿ ಕೊನೆಗೊಳ್ಳಲಿದೆ. ಸೆಪ್ಟೆಂಬರ್ನಲ್ಲಿ ನೂತನ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಅಧಿಕಾರ ಹಿಡಿಯಲು ಭರ್ಜರಿ ತಯಾರಿ ನಡೆಸಿದೆ.
ರಾಜ್ಯದಲ್ಲಿ ಮೈತ್ರಿ ಸರಕಾರ ಉರುಳಿಸಿ ಅಧಿಕಾರಿ ಹಿಡಿದಿರುವ ಬಿಜೆಪಿ ಬಿಬಿಎಂಪಿಯಲ್ಲಿಯೂ ಅಧಿಕಾರ ಪಡೆಯಲು ತುದಿಗಾಲಿನಲ್ಲಿ ನಿಂತಿದೆ. ಪ್ರಸ್ತುತ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಆಡಳಿತ ನಡೆಸುತ್ತಿದ್ದು, ಅಲ್ಪಮತದಿಂದ ಅಧಿಕಾರ ಹಿಡಿದಿದೆ. ಕಾಂಗ್ರೆಸ್ನ ನಾಲ್ವರು ಶಾಸಕರು ರಾಜೀನಾಮೆ ನೀಡಿದ್ದು, ನಂತರ ಅನರ್ಹಗೊಂಡಿದ್ದಾರೆ. ಇದರಿಂದಾಗಿ ಮೈತ್ರಿ ಪಕ್ಷಗಳ ಬಲ ಕುಸಿದಿದ್ದು, ಬಿಜೆಪಿ ಅಧಿಕಾರ ಹಿಡಿಯಲು ಸಂಖ್ಯಾಬಲ ಹೊಂದಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.