ಸಂಚಾರಿ ನಿಯಮ ಉಲ್ಲಂಘನೆಯ ದಂಡದ ಮೊತ್ತ ಹೆಚ್ಚಳ ಖಂಡಿಸಿ ಪ್ರತಿಭಟನೆ
ಬೆಂಗಳೂರು, ಆ.20: ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತದ ಹೆಚ್ಚಳವನ್ನು ವಿರೋಧಿಸಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಸದಸ್ಯರು ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಪುರಭವನದ ಮುಂಭಾಗ ಸೇರಿದ ನೂರಾರು ಲಾರಿ ಮಾಲಕರು, ಚಾಲಕರು, ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡ ಪ್ರಮಾಣವನ್ನು ಶೇ.10 ಪಟ್ಟು ಹೆಚ್ಚಿಸಿರುವುದು ಸರಿಯಲ್ಲ. ಅಲ್ಪ ಸರಕು ಸಾಗಾಣಿಕೆ ವಾಹನ ಮಾಲಕರು ಸಂಚಾರ ಉಲ್ಲಂಘನೆಯ ಹಿಂದಿನ ದಂಡವನ್ನೇ ಪಾವತಿಸುವುದು ಕಷ್ಟಕರವಾಗಿರುವ ಮೊತ್ತವನ್ನು ಶೇ.10ರಷ್ಟು ಹೆಚ್ಚಿಸಿ ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ನಗರದಲ್ಲಿ ಶೇ.95ರಷ್ಟು ಭಾರಿ ಸರಕು ಸಾಗಾಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಧಿಕ ಜನಸಂಖ್ಯೆ ಹೊಂದಿರುವ ನಗರದ ಜನತೆಗೆ ದಿನನಿತ್ಯ ಬೇಕಾಗುವ ಸರಕುಗಳನ್ನು ಸಣ್ಣ ಸಣ್ಣ ಸರಕು ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ಅವರಿಗೆ ಹೆಚ್ಚಿನ ಪ್ರಮಾಣದ ದಂಡ ವಿಧಿಸುವುದು ಸರಿಯಲ್ಲ ಎಂದು ಆರೋಪಿಸಿದರು.
ಸರಕು ಸಾಗಣೆ ವಾಹನಗಳನ್ನು 500 ರೂ.ನಿಂದ 3 ಸಾವಿರ ಕೆ.ಜಿ.ಯವರೆಗೆ ಸಾಗಿಸಲು ಪರವಾನಗಿ ಇದ್ದು, 500 ರೂ. ನಿಂದ 1000 ಸಾವಿರದವರೆಗೆ ಬಾಡಿಗೆ ಇರುತ್ತದೆ. ಅದರಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ದಂಡವೂ 100 ರಿಂದ 150ವರೆಗಿತ್ತು. ಆದರೆ ಅದನ್ನು 500 ರೂ. ನಿಂದ 1 ಸಾವಿರಕ್ಕೆ ಹೆಚ್ಚಿಸಿರುವುದು ಸರಿಯಲ್ಲ. ಕೂಡಲೇ ಸಂಚಾರ ಉಲ್ಲಂಘನೆಯ ದಂಡದ ಮೊತ್ತವನ್ನು ಮೊದಲಿನಂತೆ ಕಡಿಮೆಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.