ಮುಖ್ಯಮಂತ್ರಿ ನೆರೆಪರಿಹಾರ ನಿಧಿಗೆ ವಿದ್ಯಾರ್ಥಿಗಳ ದೇಣಿಗೆ ಹಸ್ತಾಂತರ

ಉಡುಪಿ, ಆ.21: ರಾಜ್ಯಾದ್ಯಂತ ಈ ವರ್ಷ ಸುರಿದ ಭಾರಿ ಮಳೆಯಿಂದ ಉಂಟಾದ ನೆರೆಯು ಸಾವಿರಾರು ಕುಟುಂಬಗಳನ್ನು ಬೀದಿಪಾಲು ಮಾಡಿದ್ದು, ಲಕ್ಷಾಂತರ ಮಂದಿ ಬದುಕು ಅತಂತ್ರವಾಗಿದೆ. ಈ ಸಂದಭರ್ದಲ್ಲಿ ಮ್ಮ ಸರ್ವಸ್ವವನ್ನು ಕಳೆದುಕೊಂಡಿರುವವರಿಗೆ ಸಹಾಯ ಮಾಡಲು ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಎನ್ನೆಸ್ಸೆಸ್ ಘಟಕಗಳು ಒಟ್ಟಾಗಿ ನಿಧಿಸಂಗ್ರಹಕ್ಕೆ ಮುಂದಾಗಿವೆ.
ಇದರಂತೆ ಕೆಲವು ಕಾಲೇಜುಗಳ ಸ್ವಯಂಸೇವಕರು, ವಿದ್ಯಾರ್ಥಿಗಳು ಅಗತ್ಯ ವಸ್ತುಗಳನ್ನು ಪೂರೈಸಿದರೆ, ಇನ್ನು ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ಮುಖ್ಯಮಂತ್ರಿ ನೆರೆಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಿದರು. ಹೀಗೆ ಸಂಗ್ರಹಿಸಿದ ನಿಧಿಯಲ್ಲಿ ಮಂಗಳವಾರ ಸಾಂಕೇತಿಕವಾಗಿ 2,08,743ರೂ. ವೌಲ್ಯದ ಡಿಮಾಂಡ್ ಡ್ರಾಪ್ಟ್‌ನ್ನು ಉಡುಪಿ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುಬ್ರಮ್ಮಣ್ಯ ಜೋಶಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಡಿಸಿ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜುಗಳ ಉಡುಪಿ ಜಿಲ್ಲಾ ಎನ್ನೆಸ್ಸೆಸ್ ಅಧಿಕಾರಿ ಸವಿತಾ ಎರ್ಮಾಳ್, ವಿವಿಧ ಕಾಲೇಜುಗಳ ಎನ್ನೆಸ್ಸೆಸ್ ಕಾರ್ಯಕ್ರಮಾ ಧಿಕಾರಿಗಳು, ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆ ಪದವಿಪೂರ್ವ ಕಾಲೇಜುಗಳ ಎನ್ನೆಸ್ಸೆಸ್ ಘಟಕಗಳ ವತಿಯಿಂದ ಎರಡು ಲಾರಿಗಳಲ್ಲಿ ಅಗತ್ಯ ವಸ್ತುಗಳಲ್ಲದೆ ಈವರೆಗೆ ಸುಮಾರು ನಾಲ್ಕುವರೆ ಲಕ್ಷ ರೂಪಾಯಿ ದೇಣಿಗೆಯನ್ನು ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ಜಮೆ ಮಾಡಲಾಗಿದೆ.





