ಹೆಗ್ಗುಂಜೆ ಮನೆ ಕಳವು ಪ್ರಕರಣ: ಆರೋಪಿ ಬಂಧನ; 5.45ಲಕ್ಷ ರೂ. ಮೌಲ್ಯದ ಸೊತ್ತು ವಶ

ಉಡುಪಿ, ಆ.21: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗುಂಜೆ ಗ್ರಾಮದ ಮೈರ್‌ಕೊಮೆ ಎಂಬಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಪೊಲೀಸರ ತಂಡ ಮಂಗಳೂರಿನ ಜೈಲ್ ರೋಡ್ ಸಮೀಪ ಆ.19ರಂದು ಆರೋಪಿಯನ್ನು ಬಂಧಿಸಿ, 5.45ಲಕ್ಷ ರೂ. ಮೌಲ್ಯದ ಸೊತ್ತು ಗಳನ್ನು ವಶಪಡಿಸಿಕೊಂಡಿದೆ.
ದ.ಕ. ಜಿಲ್ಲೆಯ ಬಾಳ ಗ್ರಾಮದ ಪೇಜಾವರ ಬಳಿಯ ಕಳವಾರು ನಿವಾಸಿ ಮೊಹಮದ್ ಅಲಿ ಯಾನೆ ಸುರೇಶ್ (45) ಬಂಧಿತ ಆರೋಪಿ. ಆ.3ರಿಂದ 6ರ ಮಧ್ಯಾವಧಿಯಲ್ಲಿ ಮೈರ್‌ಕೊಮೆಯಲ್ಲಿರುವ ನಟರಾಜ್ ಹಂಜಾರ್ ಎಂಬವರ ಬಾಡಿಗೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿದ್ದನು.
ಬಂಧಿತನಿಂದ ಕಳವು ಮಾಡಿದ 1.20ಲಕ್ಷ ರೂ. ಮೌಲ್ಯದ 38.75 ಗ್ರಾಂ ತೂಕದ ಚಿನ್ನಾಭರಣ, 3,00,550ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ 25ಸಾವಿರ ರೂ. ವೌಲ್ಯದ ಆಟೋ ರಿಕ್ಷಾ, ಕಳವು ಮಾಡಿದ ಹಣದಿಂದ ಖರೀದಿಸಿದ ಒಂದು ಲಕ್ಷ ರೂ. ಮೌಲ್ಯದ ಓಮಿನಿ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ನಿಶಾ ಜೇಮ್ಸ್ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮತ್ತು ಉಡುಪಿ ಡಿವೈಎಸ್ಪಿ ಟಿ.ಜೈಶಂಕರ್ ಮಾರ್ಗದರ್ಶನದಲ್ಲಿ ಬ್ರಹ್ಮಾವರ ವೃತ್ತದ ನಿರೀಕ್ಷಕ ಶ್ರೀಕಾಂತ್ ಕೆ. ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಎಸ್ಸೈ ರಾಘವೇಂದ್ರ ಸಿ, ಎಎಸ್ಸೈ ನಾರಾಯಣ, ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ಪ್ರವೀಣ್ ಶೆಟ್ಟಿಗಾರ್, ರಾಘವೇಂದ್ರ ಕಾರ್ಕಡ, ಗಣೇಶ್ ದೇವಾಡಿಗ, ದಿಲೀಪ್ ಕುಮಾರ್, ಹರೀಶ್, ಪ್ರಸಾದ್, ಪ್ರದೀಪ್ ನಾಯಕ್, ಗಣೇಶ್, ವಿಕ್ರಮ್, ವಾಸುದೇವ ಪೂಜಾರಿ ಮತ್ತು ವಾಹನ ಚಾಲಕರಾದ ಶೇಖರ ಹಾಗೂ ಅಣ್ಣಪ್ಪ ಪಾಲ್ಗೊಂಡಿದ್ದರು.







