ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ರಾಜೀವ್ ಗಾಂಧಿ, ಅರಸು ಸಂಸ್ಮರಣೆ

ಉಡುಪಿ, ಆ.21: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಂಟಿಯಾಗಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡ ಪಂಚಾಯತ್‌ರಾಜ್ ವ್ಯವಸ್ಥೆಯ ನಿರ್ಮಾತೃ, ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಯುಗವನ್ನು ಪ್ರಾರಂಭಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75ನೇ ಹಾಗೂ ಮಾಜಿ ಸಿಎಂ ದೇವರಾಜ ಅರಸು ಅವರ 104ನೇ ಹುಟ್ಟುಹಬ್ಬದ ಸಂಸ್ಮರಣಾ ಕಾರ್ಯಕ್ರಮ ವನ್ನು ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಂಚಾಲಕ ರಂಸ್ವಾಮಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿ ಮೀನುಗಾರಿಕಾ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಮಾಜಿ ಶಾಸಕ ಯು.ಆರ್. ಸಭಾಪತಿ, ದೇಶವನ್ನು 21ನೇ ಶತಮಾನಕ್ಕೆ ಕೊಂಡೊಯ್ಯುವ ದಿಸೆಯಲ್ಲಿ ಮಾಹಿತಿ ತಂತ್ರಜ್ಞಾನದ ಅನುಷ್ಟಾನಕ್ಕಾಗಿ ಕ್ರಾಂತಿಕಾರಿ ಬದಲಾವಣೆ ಮತ್ತು ಅಧಿಕಾರ ವಿಕೇಂದ್ರಿಕರಣದ ಸಲುವಾಗಿ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಆಡಳಿತದಿಂದ ದೇಶ ಇಂದು ಅಭಿವೃದ್ಧಿ ಹೊಂದಲು ಪೂರಕ ವಾತಾವರಣ ಕಲ್ಪಿಸಿದ್ದನ್ನು ನೆನಪಿಸಿಕೊಂಡರು.
ರಾಷ್ಟ್ರೀಯ ಶಿಕ್ಷಣ ನೀತಿ, ದೂರವಾಣಿ ಕ್ರಾಂತಿ, ಪಂಚಾಯತ್‌ರಾಜ್ ವ್ಯವಸ್ಥೆಯ ಬಲವರ್ಧನೆ, 18 ವರ್ಷದ ಯುವಕ/ಯವತಿಯರಿಗೆ ಮತದಾನದ ಹಕ್ಕು, ಯುವಜನ ಸಬಲೀಕರಣಕ್ಕಾಗಿ ರಾಷ್ಟ್ರೀಯ ಆಯೋಗ ರಚನೆ ಹೀಗೆ ಹಲವಾರು ಕ್ರಾಂತಿಕಾರಿ ನೀತಿ ನಿರ್ಧಾರಗಳ ಮೂಲಕ ರಾಜೀವ್ ಗಾಂಧಿ ಇಂದೂ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದರು.
ದೇವರಾಜ ಅರಸು ತಂದ ಭೂಸುಧಾರಣೆ ಯೋಜನೆಯ ಹೆಚ್ಚಿನ ಫಲಾನು ಭವಿಗಳು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಎನ್ನುವುದು ಗಮನಾರ್ಹ ಎಂದು ಸಭಾಪತಿ ನುಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ, ಆರ್‌ಜಿಪಿಆರ್‌ಎಸ್‌ನ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್, ಪಕ್ಷದ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಶಶಿಧರ ಶೆಟ್ಟಿ ಎಲ್ಲೂರು, ಡಾ.ಸುನಿತಾ ಶೆಟ್ಟಿ, ಶಬ್ಬೀರ್ ಅಹ್ಮದ್, ಮಹಾಬಲ ಕುಂದರ್, ಉದ್ಯಾವರ ನಾಗೇಶ್ ಕುಮಾರ್, ಇಸ್ಮಾಯಿಲ್ ಆತ್ರಾಡಿ, ಲಕ್ಷ್ಮೀ ನಾರಾಯಣ ಪ್ರಭು ಮುಂತಾದವರು ಭಾಗವಹಿಸಿದ್ದರು.
ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ ವಂದಿಸಿದರು.







