ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ: 2018-19ನೆ ಸಾಲಿನಲ್ಲಿ 815.66 ಕೋ.ರೂ. ವ್ಯವಹಾರ-6.9 ಕೋ.ರೂ. ಲಾಭ

ಮಂಗಳೂರು, ಆ.22: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 2018-19ನೆ ಸಾಲಿನಲ್ಲಿ 815.66 ಕೋ.ರೂ. ವ್ಯವಹಾರದೊಂದಿಗೆ ಒಟ್ಟು 6.9 ಕೋ.ರೂ. ಲಾಭ ಗಳಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.
ಕುಲಶೇಖರದಲ್ಲಿರುವ ಒಕ್ಕೂಟದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, 198 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಸಹಿತ 722 ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯತ್ವವನ್ನು ಹೊಂದಿರುವ ಒಕ್ಕೂಟವು ಕಳೆದ ಸಾಲಿನಲ್ಲಿ 117 ಸಾಂಧ್ರ ಶೀಥಲೀಕರಣ ಘಟಕ ಮತ್ತು 2 ಶೀಥಲೀಕರಣ ಕೇಂದ್ರಗಳ ಮೂಲಕ ಪ್ರತೀ ದಿನ 4.37 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿದೆ. ಪ್ರತೀ ದಿನ 3,39,406 ಲೀಟರ್ ಹಾಲು ಮತ್ತು 56,776 ಕೆಜಿ ಮೊಸರು ಮಾರಾಟವಾಗುತ್ತದೆ. ಸಂಗ್ರಹಿಸಿದ ಹಾಲಿನಲ್ಲಿ ಶೇ.94ರಷ್ಟು ಹಾಲನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ರಾಜ್ಯದ 14 ಒಕ್ಕೂಟಗಳ ಪೈಕಿ ದ.ಕ.ಒಕ್ಕೂಟವು ಅಗ್ರ ಸ್ಥಾನದಲ್ಲಿದೆ ಎಂದರು.
ಕಳೆದ ಸಾಲಿನಲ್ಲಿ ಖರೀದಿಸಿದ ಪ್ರತೀ ಲೀಟರ್ ಹಾಲಿಗೆ 31.53 ರೂ. ಮತ್ತು ಹೈನುಗಾರಿಕೆ ಅಭಿವೃದ್ಧಿಗಾಗಿ ಸದಸ್ಯರಿಗೆ ನೀಡುವ ವಿವಿಧ ಸವಲತ್ತುಗಳಿಗೆ ಪ್ರತೀ ಲೀಟರ್‌ಗೆ 0.67 ಪೈಸೆಯನ್ನು ಅನುದಾನ ರೂಪದಲ್ಲಿ ಪಾವತಿಸಲಾಗುತ್ತದೆ. ಒಕ್ಕೂಟವು ಸದಸ್ಯರು ಉತ್ಪಾದಿಸಿದದ ಪ್ರತೀ ಲೀಟರ್ ಹಾಲಿಗೆ 32.20 ರೂ. ಪಾವತಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿವೆ ಎಂದರು.
ಕಳೆದ ಸಾಲಿನಲ್ಲಿ 31.77 ಲಕ್ಷ ಲೀಟರ್ ತೃಪ್ತಿ (ಫ್ಲೆಕ್ಸಿ ಪ್ಯಾಕ್) ಹಾಲನ್ನು ಉತ್ಪಾದಿಸಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ಪ್ರದೇಶಗಳಲ್ಲಿ ಮಾರಾಟ ಮಾಡಲಾಗಿದೆ. ಮಂಡ್ಯ ಒಕ್ಕೂಟದ ಹಾಲನ್ನು ಕರ್ನಾಟಕ ಹಾಲು ಮಹಾ ಮಂಡಳಿಯ ನಿರ್ದೇಶನದಂತೆ 9.38 ಲಕ್ಷ ಲೀಟರ್ ಹಾಲನ್ನು ವಿಜಯ ವಜ್ರ ಬ್ರಾಂಡಿನಲ್ಲಿ ಕೋ-ಪ್ಯಾಕ್ ಮಾಡಿ ಆಂಧ್ರಪ್ರದೇಶಕ್ಕೆ ಸರಬರಾಜು ಮಾಡಲಾಗಿದೆ ಎಂದು ರವಿರಾಜ ಹೆಗ್ಡೆ ಹೇಳಿದರು.
ಉಪ್ಪೂರಿನಲ್ಲಿ 8739.23 ಲಕ್ಷ ರೂ. ವೆಚ್ಚದಲ್ಲಿ ನೂತನ ಡೇರಿಯನ್ನು ನಿಗದಿತ ಅವಧಿಯೊಳಗೆ ನಿರ್ಮಿಸಲಾಗಿದೆ. ಪಶುವೈದ್ಯಕೀಯ ಸೇವೆ ಬಲಪಡಿಸಲು ಬೈಂದೂರು, ಕಡಬ, ಮಂಗಳೂರಿನಲ್ಲಿ ಮೂರು ಕಚೇರಿಗಳನ್ನು ತೆರೆಯಲಾಗಿದೆ. 22 ಬಿಎಂಸಿ ಸಂಘಗಳನ್ನು ರಚಿಸಲಾಗಿದೆ.
1.62 ಕೋ.ರೂ. ವೆಚ್ಚದಲ್ಲಿ 35 ಸಾವಿರ ಬಾಟಲ್ ಸಾಮರ್ಥ್ಯದ ಸಿಪಿಪಿ ಬಾಟಲ್ ಸುವಾಸಿತ ಹಾಲಿನ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಿದೆ. 688 ಡೀಲರ್‌ಗಳಿಗೆ 13.40 ಲಕ್ಷ ರೂ. ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗಿದೆ. ಒಕ್ಕೂಟದ ರೈತರ ಕಲ್ಯಾಣ ಟ್ರಸ್ಟ್ ಮೂಲಕ ಹಾಲು ಉತ್ಪಾದಕರಿಗೆ ಪ್ರಕೃತಿ ವಿಕೋಪ, ಅಪಘಾತ, ಗಂಭೀರ ಕಾಯಿಲೆಯ ವೇಳೆ ಪರಿಹಾರ ಧನವಾಗಿ 102.44 ಲಕ್ಷ ಮತ್ತು ಉತ್ಪಾದಕರ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹಧನವಾಗಿ 4.89 ಲಕ್ಷ ರೂ.ವನ್ನು ನೀಡಲಾಗಿದೆ.
ಮುಂದಿನ ಯೋಜನೆ: 2019-20ನೆ ಸಾಲಿನಲ್ಲಿ 911 ಕೋ.ರೂ. ವಹಿವಾಟಿನ ಗುರಿ ಹಾಕಲಾಗಿದೆ. ಪುತ್ತೂರಿನಲ್ಲಿ 12 ಕೋ.ರೂ. ವೆಚ್ಚದಲ್ಲಿ ನೂತನ ಶೀಥಲೀಕರಣ ಘಟಕ ಸ್ಥಾಪಿಸಲು ಮತ್ತು 4 ಕೋ.ರೂ. ವೆಚ್ಚದಲ್ಲಿ ಶಿಬಿರ ಕಚೇರಿಯನ್ನು ನಿರ್ಮಿಸಲು ಯೋಜಿಸಲಾಗಿದೆ. ಮಂಗಳೂರು ಡೇರಿ ಸ್ಥಾವರದಲ್ಲಿ 2.50 ಕೋ.ರೂ.ವೆಚ್ಚದಲ್ಲಿ ಆಟೊಮೇಶನ್ ಮಾಡಲು ಉದ್ದೇಶಿಸಲಾಗಿದೆ. ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ 10 ರೂ. ವೌಲ್ಯದ ಪೇಡಾ, ಕ್ಯಾಶು ಬರ್ಫಿಯನ್ನು ಬಿಡಿ ಪ್ಯಾಕೆಟ್‌ನಲ್ಲಿ ಮತ್ತು ಪನೀರನ್ನು 100 ಮತ್ತು 500 ಗ್ರಾಂಗಳಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ನಿರ್ದೇಶಕರಾದ ಸುಚರಿತ ಶೆಟ್ಟಿ, ಜಗದೀಶ್ ಕಾರಂತ್, ಹದ್ದೂರು ರಾಜೇಶ್ ಶೆಟ್ಟಿ, ಸುಧಾಕರ ಶೆಟ್ಟಿ ಕಾರ್ಕಳ, ಸವಿತಾ ಶೆಟ್ಟಿ, ಸುಭದ್ರ ರಾವ್,ಶೀತಲಾ ಶೆಟ್ಟಿ, ಸುಧಾಕರ ರೈ, ವ್ಯವಸ್ಥಾಪಕ ನಿರ್ದೇಶಕ ಡಾ ಜಿ.ವಿ.ಹೆಗಡೆ, ಮಾರುಕಟ್ಟೆ ವ್ಯವಸ್ಥಾಪಕ ಜಯದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.








