ಕುಮಾರಸ್ವಾಮಿಗೆ ಕಾಂಗ್ರೆಸ್ ನೀಡಿರುವ ಹಿಂಸೆಗೆ ನಾನೇ ಸಾಕ್ಷಿ: ಜೆಡಿಎಸ್ ಮುಖಂಡ ಶರವಣ

ಬೆಂಗಳೂರು, ಆ.23: ಕಾಂಗ್ರೆಸ್ ಶಾಸಕರ ಅತಿರೇಕದ ವರ್ತನೆಗಳು ಕುಮಾರಸ್ವಾಮಿಗೆ ಬೇಸರ ತಂದಿತ್ತು. ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿಗೆ ಏನು ಹಿಂಸೆ ಕೊಟ್ಟಿದ್ದಾರೆ ಎಂಬುದಕ್ಕೆ ನಾನೇ ಸಾಕ್ಷಿ ಎಂದು ಪರಿಷತ್ ಸದಸ್ಯ ಶರವಣ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಕಿರುಕುಳ ಕುರಿತು ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡರ ಎದುರು ಹಲವು ಬಾರಿ ಕಣ್ಣೀರು ಹಾಕಿದ್ದಾರೆ. ಹೀಗಾಗಿಯೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಜೆಡಿಎಸ್ ವರಿಷ್ಠರು ಆತುರದ ತೀರ್ಮಾನ ಮಾಡದಂತೆ ಮನವಿ ಮಾಡಿದ್ದರು ಎಂದು ತಿಳಿಸಿದರು.
ಸಿದ್ದರಾಮಯ್ಯ ಸೇರಿ ಹಲವಾರು ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಲ್ಲಿರುವುದನ್ನು ಸಹಿಸಲು ಸಾಧ್ಯವಾಗಲಿಲ್ಲ. ಹೇಗಾದರು ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕುಮಾರಸ್ವಾಮಿಯನ್ನು ಕೆಳಗಿಳಿಸಲು ತೀರ್ಮಾನ ಮಾಡಿ, ಅದರಂತೆ ಮೈತ್ರಿ ಸರಕಾರವನ್ನು ಉರುಳಿಸಿದ್ದಾರೆ ಎಂದು ಅವರು ಹೇಳಿದರು.
ಮೈತ್ರಿ ಸರಕಾರ ಪತನವಾಗಲು ಸಿದ್ದರಾಮಯ್ಯ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ.
-ಶರವಣ, ಪರಿಷತ್ ಸದಸ್ಯ