ಶಾ ಫೈಸಲ್ ಬಂಧನ ವಿರುದ್ಧ ಮನವಿ ವಿಚಾರಣೆ ಸೆ.3ಕ್ಕೆ

ಹೊಸದಿಲ್ಲಿ,ಆ.23: ಆಗಸ್ಟ್ 14ರಂದು ದಿಲ್ಲಿ ವಿಮಾನ ನಿಲ್ದಾಣದಲ್ಲಿ ತನ್ನನ್ನು ಅಕ್ರಮವಾಗಿ ಬಂಧಿಸಲಾಗಿದೆ ಮತ್ತು ನಂತರ ಶ್ರೀನಗರಕ್ಕೆ ಕೊಂಡೊಯ್ದು ಗೃಹ ಬಂಧನದಲ್ಲಿರಸಲಾಗಿದೆ ಎಂದು ಆರೋಪಿಸಿ ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ದಿಲ್ಲಿ ನ್ಯಾಯಾಲಯ ಸೆಪ್ಟೆಂಬರ್ 3ರಂದು ನಡೆಸಲಿದೆ. ಎರಡೂ ಪಕ್ಷಗಳು ತಮ್ಮ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ ನ್ಯಾಯಾಧೀಶರಾದ ಮನಮೋಹನ್ ಮತ್ತು ಸಂಗೀತಾ ಧಿಂಗ್ರ ಸೆಹಗಲ್ ಅವರ ಪೀಠ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ ನಡೆಸುವುದಾಗಿ ತಿಳಿಸಿತು.
ವಿಚಾರಣೆಯನ್ನು ಶೀಘ್ರ ನಡೆಸುವಂತೆ ಮಾಡಿದ ಮನವಿಯನ್ನು ತಳ್ಳಿಹಾಕಿದ ಪೀಠ, ಈ ಪ್ರಕರಣ ಸಮಯ ತೆಗೆದುಕೊಳ್ಳಲಿದೆ ಮತ್ತು ಅದು ರಾತ್ರಿಬೆಳಗಾಗುವುದರೊಳಗೆ ನಡೆಯಲು ಸಾಧ್ಯವಿಲ್ಲ ಎಂದು ತಿಳಿಸಿತು. ಶಾ ಫೈಸಲ್ ಪರವಾಗಿ ಸಲ್ಲಿಸಿರುವ ಹೆಬಿಯಸ್ ಕಾರ್ಪಸ್ ಮನವಿಯಲ್ಲಿ ಅವರು ಅಮೆರಿಕಕ್ಕೆ ವಿದ್ಯಾಭ್ಯಾಸಕ್ಕೆ ತೆರಳಲಿರುವ ಬಗ್ಗೆ ಉಲ್ಲೇಖಿಸಿಲ್ಲವಾದ ಕಾರಣ ಆ ವಿಷಯವನ್ನು ಪರಿಶೀಲಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.