ಗೆಜೆಟ್ ನೋಟಿಫಿಕೇಶನ್ ಬಳಿಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ನಿಷೇಧ: ಹೈಕೋರ್ಟ್‌ಗೆ ಹೇಳಿಕೆ
ಬೆಂಗಳೂರು, ಆ.23: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಜಾಹೀರಾತು ನಿಷೇಧಿಸುವ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018ನ್ನು ಸರಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಬಳಿಕ ಜಾರಿಗೆ ಬರಲಿದೆ ಎಂದು ಸರಕಾರದ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು. ಈ ಕುರಿತು ಸಾಯಿದತ್ತ, ಮಾಯ್ಗೆಗೌಡ ಸೇರಿ ಹಲವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಸರಕಾರದ ಪರ ವಾದಿಸಿದ ವಕೀಲರು, ಕೆಎಂಸಿ ಕಾಯ್ದೆ ಸೆಕ್ಷನ್ 425ರ ಪ್ರಕಾರ ಬೈಲಾವನ್ನು ಮೂರು ತಿಂಗಳಲ್ಲಿ ಸರಕಾರ ಅನುಮೋದಿಸಬೇಕಿತ್ತು. ಆದರೆ, ಅನುಮೋದಿಸದ ಕಾರಣ, ಅದು ಡೀಮ್ಡ್ ಅನುಮೋದನೆ ಪಡೆದಿದೆ. ಸರಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಬಳಿಕ ಬೈಲಾ-2018 ಜಾರಿಗೆ ಬರಲಿದೆ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ಕೆಎಂಸಿ ಕಾಯ್ದೆ ಸೆಕ್ಷನ್ 426(ಎ) ಪ್ರಕಾರ 2018ರ ಬೈಲಾಗೆ ರಾಜ್ಯ ಸರಕಾರ ನೋಟಿಸ್‌ಫಿಕೇಶನ್ ಹೊರಡಿಸಬೇಕು. ಆದರೆ, ಹೊರಡಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠು ವಿಚಾರಣೆಯನ್ನು ಮುಂದೂಡಿತು.