ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಮಳೆಯ ಅಡ್ಡಿ-ಆತಂಕ
ಉಡುಪಿ, ಆ.23: ಉಡುಪಿ ಶ್ರೀಕೃಷ್ಣ ಮಠದಲ್ಲಿ ಶುಕ್ರವಾರ ಆಚರಿಸಲಾದ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಸಡಗರಕ್ಕೆ ಆಗಾಗ ಸುರಿಯುತಿದ್ದ ಮಳೆಯ ಅಡ್ಡಿ-ಆತಂಕ ಎದುರಾಯಿತು. ಇದರಿಂದ ನಾಳೆ ನಡೆಯುವ ಶ್ರೀಕೃಷ್ಣ ಲೀಲೋತ್ಸವಕ್ಕೂ ಮಳೆ ಹಸ್ತಕೆ್ಷೀಪ ನಡೆಸುವ ಭೀತಿ ವ್ಯಕ್ತವಾಗಿದೆ.
ನಿರ್ಜಲ ಉಪವಾಸದಲ್ಲಿದ್ದ ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಬೆಳಗ್ಗೆ ಮತ್ತು ರಾತ್ರಿ ಲಕ್ಷ ತುಳಸಿ ಅರ್ಚನೆ ಯೊಂದಿಗೆ ಮಹಾಪೂಜೆ ನೆರವೇರಿಸಿದರು. ಮಧ್ಯರಾತ್ರಿ 12:12ಕ್ಕೆ ಸರಿಯಾಗಿ ಸ್ವಾಮೀಜಿ ಕೃಷ್ಣಾರ್ಘ್ಯ ಪ್ರದಾನ ಮಾಡಿದರು. ಬಳಿಕ ಭಕ್ತರು ಅರ್ಘ್ಯ ಪ್ರದಾನ ಮಾಡಿದರು.
ಕಳೆದೆರಡು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ಅತೀವ ಸಂಕಷ್ಟಕ್ಕೆ ಸಿಲುಕಿದವರು ಹೊರ ಜಿಲ್ಲೆ ಹಾಗೂ ಹೊರನಾಡಿನಿಂದ ಬಂದ ವ್ಯಾಪಾರಿಗಳು. ಉಡುಪಿಯ ಪ್ರಧಾನ ಉತ್ಸವ ಎನಿಸಿದ ಕೃಷ್ಣಾಷ್ಟಮಿ-ವಿಟ್ಲಪಿಂಡಿ ಸಂದರ್ಭದಲ್ಲಿ ಹೊರಜಿಲ್ಲೆಗಳಿಂದ ಮಾತ್ರವಲ್ಲದೇ ದೇಶ-ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಕೃಷ್ಣ ಭಕ್ತರು ಹಾಗೂ ಪ್ರವಾಸಿಗರಿಂದಾಗಿ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ ಶತ:ಸಿದ್ಧ ಎನಿಸಿತ್ತು.
ಆದರೆ ಈ ಬಾರಿ ವ್ಯಾಪಾರಕ್ಕೆ ವಸ್ತು ಹೊರತೆಗೆದರೆ ಮಳೆಯಿಂದ ಅವು ಒದ್ದೆಯಾಗಿ ಬಿಡುತ್ತಿದೆ.ರಥಬೀದಿ ಸುತ್ತಮುತ್ತ, ಕೃಷ್ಣಮಠದ ನಾಲ್ಕು ದಿಕ್ಕುಗಳಲ್ಲಿ, ತೆಂಕಪೇಟೆ, ಬಡಗುಪೇಟೆಗಳಲ್ಲಿ ರಸ್ತೆ ಬದಿ ತಮ್ಮ ಸಂತೆ ಬಿಡಿಸಿ ಕೂತ ವ್ಯಾಪಾರಿಗಳು ಮಳೆಯಲ್ಲಿ ಒದ್ದೆಯಾಗಿ ಚಳಿಯಿಂದ ಥರಗುಟ್ಟುತಿದ್ದರು. ಅವರ ಅಂಗಡಿ ಎದುರು ಜನರೇ ಇರಲಿಲ್ಲ.
ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ಮಠದ ರಥಬೀದಿ, ರಾಜಾಂಗಣ ಪಾರ್ಕಿಂಗ್ ಪ್ರದೇಶ ಸೇರಿದಂತೆ ಮಠದ ಪರಿಸರದಲ್ಲಿ ಈ ಬಾರಿ ಕಡಿಮೆ ಸಂಖ್ಯೆಯ ವೇಷಧಾರಿಗಳು ಕಂಡುಬಂದರು.
ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಸುವರ್ಣ ತೊಟ್ಟಿಲಿನಲ್ಲಿ ಬಾಲಕೃಷ್ಣನ ಅಲಂಕಾರವನ್ನು ಮಾಡಿದರು. ಬಳಿಕ ಭೋಜನ ಶಾಲೆಯಲ್ಲಿ ಪರ್ಯಾಯ ಸ್ವಾಮೀಜಿಗಳು ಹಾಗೂ ಅದಮಾರು ಮಠದ ಕಿರಿಯ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಕೃಷ್ಣನಿಗೆ ಸಮರ್ಪಿಸುವ ಲಡ್ಡು ಮತ್ತು ಕ್ಕುಲಿ ತಯಾರಿಗೆ ಚಾಲನೆ ನೀಡಿದರು.
ಅಷ್ಟಮಿಯ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದ ಗರ್ಭಗುಡಿ, ಮಠದ ಸುತ್ತುಪೌಳಿ, ಚಂದ್ರಶಾಲೆ, ತೀರ್ಥ ಮಂಟಪ, ಮಧ್ವಮಂಟಪ, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ ಸಹಿತ ಇಡೀ ಕೃಷ್ಣ ಮಠಕ್ಕೆ ವಿಶೇ ಹೂವಿನ ಅಲಂಕಾರ ಮಾಡಲಾಗಿತ್ತು.
ಭಜನಾ ಕಾರ್ಯಕ್ರಮ
ಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ವತಿಯಿಂದ ಮಧ್ವಮಂಟಪದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಬೆಳಗ್ಗೆ 10ಗಂಟೆಯಿಂದ ಸಂಜೆ ಆರು ಗಂಟೆವರೆಗೆ ಹಮ್ಮಿಕೊಂಡಿದ್ದ ಭಜನಾ ಕಾರ್ಯಕ್ರಮವನ್ನು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್, ಯಶಪಾಲ್ ಸುವರ್ಣ, ಗೋಪಾಲ್ ಕುಂದರ್, ಭಾಸ್ಕರ ಕಿದಿಯೂರು, ಶಿವರಾಮ ಅಂಬಲ್ಪಾಡಿ, ಸಿ.ಸಿ.ಕರ್ಕೇರ, ಭೋಜರಾಜ್ ಕಿದಿಯೂರು, ಸುಧಾಕರ ಮೆಂಡನ್‌ಮೊದಲಾದವರು ಉಪಸ್ಥಿತರಿದ್ದರು.
ನಾಳೆ ನಡೆಯುವ ವಿಟ್ಲ ಪಿಂಡಿ ಉತ್ಸವದಲ್ಲಿ ರಥಬೀದಿ ಹಾಗೂ ಉಡುಪಿ ನಗರದಲ್ಲಿ ಅಲಾರೆ ಗೋವಿಂದ ಕಾರ್ಯಕ್ರಮ ನಡೆಯಲಿದೆ. ನಾಳೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮಠದ ಪರಿಸರ ದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಒಂದು ಕೆಎಸ್‌ಆರ್‌ಪಿ, ಮೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ಈಗಾಗಲೇ ಮಠದ ಪರಿಸರದಲ್ಲಿ ನಿಯೋಜಿಸಲಾಗಿದೆ. ಜಿಲ್ಲೆಯ ಮೂರು ಮತ ಎಣಿಕಾ ಕೇಂದ್ರಗಳಿಗೆ ನಿಯೋಜಿಸಲಾದ ಎರಡು ಕೆಎಸ್‌ಆರ್‌ಪಿ ಹಾಗೂ ಮೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ಮತ ಎಣಿಕೆ ಕಾರ್ಯ ಮುಗಿದ ಬಳಿಕ ಉಡುಪಿ ಶ್ರೀಕೃಷ್ಣ ಮಠದಲ್ಲಿ ಇರಿಸಲಾಗುತ್ತದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.







