ಜಾತಿ ನಿರ್ಮೂಲನೆ ಮಾಡಲು ನಾವು ಹೋರಾಟಗಾರರಲ್ಲ: ಬಿ.ಎಲ್.ಸಂತೋಷ್
ಬೆಂಗಳೂರು, ಆ.24: ಐಪಿಎಸ್, ಐಎಎಸ್ ವರ್ಗದಲ್ಲೂ ಬ್ರಾಹ್ಮಣ, ಒಕ್ಕಲಿಗ ಸೇರಿದಂತೆ ಜಾತಿ ಸಂಘಗಳು ಅಧಿಕೃತವಾಗಿ, ಅನಧಿಕೃತವಾಗಿ ಹುಟ್ಟಿಕೊಂಡಿವೆ. ಇವುಗಳ ನಿರ್ಮೂಲನೆ ಮಾಡಲು ನಾವು ಹೋರಾಟಗಾರರಲ್ಲವೆಂದು ರಾಷ್ಟ್ರೀಯ ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದ್ದಾರೆ.
ಶನಿವಾರ ನಗರದ ಟೌನ್‌ಹಾಲ್‌ನಲ್ಲಿ ಆಯೋಜಿಸಿದ್ದ ಲೇಖಕ ಸಂತೋಷ್ ತಮ್ಮಯ್ಯರ ರಣರಂಗದ ಅಮರಸ್ಮತಿ ಸಮರ ಭೈರವಿ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉಗ್ರಗಾಮಿಗಳು ಪುಲ್ವಾಮದಲ್ಲಿ ದಾಳಿ ನಡೆಸಿ ಭಾರತೀಯ ಸೈನಿಕರನ್ನು ಕೊಂದಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಸೈನಕ್ಕೆ ನೈತಿಕ ಬೆಂಬಲವನ್ನು ಕೊಡುವುದನ್ನು ಬಿಟ್ಟು, ಸಾವನ್ನಪ್ಪಿದ ಸೈನಿಕರಲ್ಲಿ ಯಾವ, ಯಾವ ಜಾತಿಯವರು ಇದ್ದರೆಂದು ಕೇಂದ್ರದ ಮಾಜಿ ಸಚಿವರೊಬ್ಬರು ಟ್ವೀಟರ್‌ನಲ್ಲಿ ಪ್ರಕಟಿಸಿದ್ದರು. ಇದನ್ನು ಪ್ರಶ್ನಿಸಿದಾಗ ನಯವಾಗಿ ನುಣುಚಿಕೊಳ್ಳಲು ಪ್ರಯತ್ನಿಸಿದರು. ಇವು ಕಾಂಗ್ರೆಸ್ ವೈಚಾರಿಕಾ ಚಿಂತನೆಗಳು ಎಂದು ಅವರು ಟೀಕಿಸಿದರು.
ಮಹಾರಾಷ್ಟ್ರದಲ್ಲಿ ಶಿವಾಜಿ ಕುರಿತು ಎಂಟು ಕೋಟಿ ಪುಟಗಳಷ್ಟು ಸಾಹಿತ್ಯ ರಚನೆಯಾಗಿದೆ. ಸಾವಿರಾರು ಪುಟಗಳಷ್ಟು ಜನಪದ ಹಾಡುಗಳನ್ನು ಬರೆಯಲಾಗಿದೆ. ಆದರೆ, ರಾಜ್ಯದಲ್ಲಿ ಬ್ರಿಟಿಷರ ವಿರುದ್ಧ ನಿರಂತರವಾಗಿ ಹೋರಾಡಿದ ವೀರ ಕನ್ನಡಿಗ ಸಂಗೊಳ್ಳಿ ರಾಯಣ್ಣನನ್ನು ಕೇವಲ ಕುರುಬ ಜಾತಿಗೆ ಸೀಮಿತಗೊಳಿಸಿದ್ದೇವೆ. ಇದು ಸರಿಯೇ ಎಂದು ಅವರು ಪ್ರಶ್ನಿಸಿದರು.
ಕೇಂದ್ರ ಸಚಿವ ವಿ.ಕೆ.ಸಿಂಗ್ ಮಾತನಾಡಿ, ಭಾರತೀಯ ಸೈನಿಕರ ತ್ಯಾಗ, ಶೌರ್ಯವನ್ನು ಶಾಲಾ ಹಂತದಲ್ಲಿಯೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು. ಇತರೆ ದೇಶಗಳಿಗೆ ಹೋಲಿಸಿದರೆ ಭಾರತೀಯ ಸೈನಿಕರ ಧೈರ್ಯ, ಸಾಹಸಗಳು ಅವಿಸ್ಮರಣೀಯವಾದದ್ದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನ್ಯಾಧಿಕಾರಿ ಪಿ.ಎಸ್.ಗಣಪತಿ, ಮಾಜಿ ಐಪಿಎಸ್ ಕೆ.ಅಣ್ಣಾಮಲೈ ಮತ್ತಿತರರಿದ್ದರು.
ಭಾರತಕ್ಕೆ ಹಾಗೂ ಸೈನ್ಯಕ್ಕೆ ಜವಾಹರಲಾಲ್ ನೆಹರು ಮಾಡಿರುವ ಅನ್ಯಾಯ ಮುಂದಿನ ನೂರು ಪೀಳಿಗೆಗಳು ಸವೆದರು ತೀರುವುದಿಲ್ಲ. ಈ ಅನ್ಯಾಯಗಳನ್ನು ಈಗಿನ ಪ್ರಧಾನಿ ನರೇಂದ್ರ ಮೋದಿ ಸರಿಪಡಿಸುತ್ತಿದ್ದಾರೆ.
-ಬಿ.ಎಲ್.ಸಂತೋಷ್, ಬಿಜೆಪಿ ನಾಯಕ