ವಿಪಕ್ಷ ನಾಯಕನ ಆಯ್ಕೆ ಸಂಬಂಧ ಸೋಮವಾರ ಕಾಂಗ್ರೆಸ್ ಮಹತ್ವದ ಸಭೆ

ಬೆಂಗಳೂರು, ಆ. 25: ವಿಪಕ್ಷ ನಾಯಕ ಹಾಗೂ ಪಕ್ಷದ ಪದಾಧಿಕಾರಿಗಳ ಆಯ್ಕೆ ಸಂಬಂಧ ನಾಳೆ(ಆ.26) ಎಐಸಿಸಿ ಮುಖಂಡ ಗುಲಾಂ ನಬಿ ಆಜಾದ್ ಮತ್ತು ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡರ ಜತೆ ಮಹತ್ವದ ಸಭೆ ನಡೆಯಲಿದೆ.
ಕಾಂಗ್ರೆಸ್-ಜೆಡಿಎಸ್ ಸರಕಾರ ಪತನದ ಬಳಿಕ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿರುವ ಮೈತ್ರಿ ಮುಖಂಡರು ಉಪಚುನಾವಣೆಗೆ ಸನ್ನದ್ದರಾಗುತ್ತಿದ್ದಾರೆ. ಈ ಮಧ್ಯೆ ಪಕ್ಷದ ಪದಾಧಿಕಾರಿಗಳ ನೇಮಕ, ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಇನ್ನಿತರ ವಿಚಾರಗಳನ್ನು ಚರ್ಚಿಸಲಿದ್ದಾರೆಂದು ಗೊತ್ತಾಗಿದೆ.
ವಿಪಕ್ಷ ನಾಯಕ ಆಯ್ಕೆಗೂ ಮುನ್ನ ರಾಜ್ಯದ ಎಲ್ಲ ನಾಯಕರ ಜೊತೆ ಚರ್ಚೆ ನಡೆಸಬೇಕು. ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಬಾರದೆಂದು ರಾಜ್ಯದ ಹಲವು ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಈ ವಿಚಾರಕ್ಕೆ ಕಾಂಗ್ರೆಸ್ ವರಿಷ್ಠರು ಮಧ್ಯಪ್ರವೇಶ ಮಾಡಿದ್ದಾರೆ.
ಶಾಸಕಾಂಗ ಪಕ್ಷ ನಾಯಕನಾಗಿರುವ ಸಿದ್ದರಾಮಯ್ಯರನ್ನೇ ವಿಪಕ್ಷ ನಾಯಕನಾಗಿ ಮುಂದುವರೆಸಲು ವರಿಷ್ಠರು ಇಚ್ಚಿಸಿದ್ದರು. ಆದರೆ, ಇದಕ್ಕೆ ರಾಜ್ಯದ ಕೆಲ ನಾಯಕರು ಆಕ್ಷೇಪ ಎತ್ತಿದ ಕಾರಣಕ್ಕೆ ಸಮಾಲೋಚನೆ ನಡೆಸಲಾಗುತ್ತಿದೆ. ಸಿದ್ದರಾಮಯ್ಯನವರಿಗೆ ಬೆಂಬಲವಾಗಿದ್ದ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದು, ಇದೀಗ ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿದ್ದಾರೆ.
ಹೀಗಾಗಿ ಹಳೆಯ ಕಾಂಗ್ರೆಸಿಗರು ತಮ್ಮದೆ ರೀತಿಯಲ್ಲಿ ಲಾಬಿ ಮುಂದುವರೆಸಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಗೊಂದಲಗಳಿವೆ. ನೆರೆ ಸಂಕಷ್ಟದಿಂದ 22 ಜಿಲ್ಲೆಗಳ ಜನತೆ ಸಂತ್ರಸ್ತರಾಗಿದ್ದು, ಕೇಂದ್ರದಿಂದ ಬಿಡಿಗಾಸು ಅನುದಾನ ಬಂದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದು ಇಪ್ಪತ್ತೈದು ದಿನಗಳ ಕಳೆಯುತ್ತಿದ್ದರೂ ಸಚಿವರಿಲ್ಲ. ಆದರೆ, ಅಧಿಕೃತ ವಿಪಕ್ಷ ಮೌನಕ್ಕೆ ಶರಣಾಗಿದೆ.
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರೇ ಮಾತನಾಡಲಿ ಎಂದು ಇತರ ಮುಖಂಡರು ಸುಮ್ಮನಿದ್ದರೆ, ಸಿದ್ದರಾಮಯ್ಯ ಸರಕಾರ ಟೀಕಿಸುವ ಬದಲು ಮೈತ್ರಿ ಪಕ್ಷ ಜೆಡಿಎಸ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ. ನೆರೆ ಅಧ್ಯಯನಕ್ಕೆ ತೆರಳಿದ್ದ ಕಾಂಗ್ರೆಸ್ ತಂಡವೂ ಸರಕಾರ ವೈಫಲ್ಯಗಳನ್ನು ಎತ್ತಿ ತೋರಿಸುವಲ್ಲಿ ಸೋತಿದೆ ಎಂಬ ಆರೋಪಗಳಿವೆ.
ಹೀಗಾಗಿ ನಾಳೆ ನಡೆಯಲಿರುವ ಸಭೆ ಹೆಚ್ಚಿನ ಮಹತ್ವವಿದ್ದು, ವಿಪಕ್ಷ ನಾಯಕನನ್ನಾಗಿ ಸಿದ್ದರಾಮಯ್ಯನವರನ್ನೇ ಮುಂದುವರೆಸಲಿದ್ದಾರೆಯೋ ಅಥವಾ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್ ಹಾಗೂ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ಕುಮಾರ್ ಸೇರಿದಂತೆ ಬೇರೆಯವರನ್ನು ಆಯ್ಕೆ ಮಾಡುವರೋ ಎಂಬ ಕುತೂಹಲ ಸೃಷ್ಟಿಸಿದೆ.
ಈ ಬೆಳವಣಿಗೆಗಳ ನಡುವೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಬಿರುಸುಗೊಂಡಿದ್ದು, ನಾಳೆ ರಾಜ್ಯಕ್ಕೆ ಆಗಮಿಸಲಿರುವ ವರಿಷ್ಠರು, ರಾಜ್ಯ ಮುಖಂಡರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.