ಆ.31ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದ.ಕ. ಜಿಲ್ಲಾ ಪ್ರವಾಸ
ಮಳೆ-ನೆರೆ ಹಾನಿ ಪರಿಶೀಲನೆ

ಮಂಗಳೂರು, ಆ. 26 ಕೆಲವು ದಿನಗಳ ಹಿಂದೆ ಜಿಲ್ಲಾದ್ಯಂತ ಸುರಿದ ಭಾರೀ ಮಳೆ ಮತ್ತು ನೆರೆ ಹಾವಳಿಗೆ ತತ್ತರಿಸಿರುವ ಜನರಿಗೆ ಸಾಂತ್ವನ ನೀಡಲು ಮತ್ತು ಅಧ್ಯಯನ-ಪರಿಶೀಲನೆ ನಡೆಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆ.31ರಂದು ದ.ಕ.ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕರೆದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿಗೆ ಆಗಮಿಸುವ ಅವರು ತ್ಯಾಜ್ಯದಿಂದ ತತ್ತರಿಸಿರುವ ಪಚ್ಚನಾಡಿ ಮಂದಾರ ಪ್ರದೇಶಕ್ಕೆ ಭೇಟಿ ನೀಡುವರು. ಬಳಿಕ ಬೆಳ್ತಂಗಡಿ ತಾಲೂಕಿಗೆ ತೆರಳಿ ಪರಿಶೀಲಿಸಲಿದ್ದಾರೆ. ಅಪರಾಹ್ನ 3 ಗಂಟೆಗೆ ನಗರದ ಪುರಭವನದಲ್ಲಿ ನಡೆಯುವ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸರಕಾರದಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ
ಪ್ರಾಕೃತಿಕ ವಿಕೋಪದ ಹಿನ್ನಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಸಂತ್ರಸ್ತರಿಗೆ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಮಳೆಹಾನಿಯಾದಾಗ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಪ್ರಾಕೃತಿಕ ವಿಕೋಪ ಸಂಭವಿಸಿದ ಬೆನ್ನಿಗೆ ಅವರು ರಾಜ್ಯಕ್ಕೆ ಭೇಟಿ ನೀಡಿ ತುರ್ತು ಪರಿಹಾರವನ್ನು ಸ್ಥಳದಲ್ಲೇ ಘೋಷಿಸಿದ್ದರು. ಆದರೆ, ಹಾಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲೇ ಇಲ್ಲ. ಕೇಂದ್ರದ ಸಚಿವರುಗಳು ವೈಮಾನಿಕ ಸಮೀಕ್ಷೆ ನಡೆಸಿದರೇ ವಿನಃ ಪರಿಹಾರ ಘೋಷಿಸಿಲ್ಲ. ದ.ಕ.ಜಿಲ್ಲೆಗೆ ಕೇಂದ್ರದ ಅಧ್ಯಯನ ತಂಡ ಆಗಮಿಸುವುದಿಲ್ಲ ಎಂಬ ಮಾಹಿತಿ ಇದೆ. ಇದು ಸ್ಥಳೀಯ ಸಂಸದರ, ರಾಜ್ಯ ಸರಕಾರದ ವೈಫಲ್ಯ ಎನ್ನದೆ ವಿಧಿಯಿಲ್ಲ ಎಂದರು.
ಭಾವನಾತ್ಮಕ ವಿಚಾರದ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವ ಬದಲು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಾದರೂ ತುರ್ತು ಸ್ಪಂದಿಸುವ ಕಾರ್ಯಕ್ಕೆ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುವ ಬಿಜೆಪಿ ಸರಕಾರ ಮಾಡಲಿ ಎಂದ ರಮಾನಾಥ ರೈ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ನೇಮಕದಿಂದ ಕಾಂಗ್ರೆಸ್‌ಗೇನೂ ಹೊಡೆತವಿಲ್ಲ. ಬಿಜೆಪಿಗೆ ಹೊಡೆತ ಬೀಳಬಹುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಮೊಯ್ದಿನ್ ಬಾವಾ, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಮಿಥುನ್ ರೈ, ಶಶಿಧರ ಹೆಗ್ಡೆ, ನವೀನ್ ಡಿಸೋಜ, ಸಂತೋಷ್ ಶೆಟ್ಟಿ ಅಸೈಗೋಳಿ, ಸಂತೋಷ್ ಶೆಟ್ಟಿ, ವಿಶ್ವಾಸ್ ಕುಮಾರ್ ದಾಸ್, ಬೇಬಿ ಕುಂದರ್, ಖಾಲಿದ್ ಉಜಿರೆ ಮತ್ತಿತರರು ಉಪಸ್ಥಿತರಿದ್ದರು.









