ಆ.30: ವನ್ಯಜೀವಿ ಪತ್ರಿಕೋದ್ಯಮ -ಅರಣ್ಯ ಸಂರಕ್ಷಣೆ ಕುರಿತ ರಾಜ್ಯಮಟ್ಟದ ವಿಚಾರಸಂಕಿರಣ
ಉಡುಪಿ, ಆ.26: ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಅರಣ್ಯ ಇಲಾಖೆ ಹಾಗೂ ಉಡುಪಿ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಖ್ಯಾತನಾಮ ವನ್ಯಜೀವಿ ಛಾಯಾಗ್ರಾಹಕರು ಹಾಗೂ ಲೇಖಕರೂ ಆಗಿರುವ ಕೃಪಾಕರ ಸೇನಾನಿ ಅವರ ಅಗ್ರಗೋಷ್ಠಿ ಯೊಂದಿಗೆ ವನ್ಯಜೀವಿ ಪತ್ರಿಕೋದ್ಯಮ ಮತ್ತು ಅರಣ್ಯ ಸಂರಕ್ಷಣೆ ವಿಷಯದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಆ.30ರಂದು ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 9:30ಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವಿಚಾರ ಸಂಕಿರಣ ವನ್ನು ಉದ್ಘಾಟಿಸಲಿರುವರು. ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಅಧ್ಯಕ್ಷತೆ ವಹಿಸಲಿರುವರು. ಬೆಳಗ್ಗೆ 10:30ರಿಂದ 12 ಗಂಟೆಯವರೆಗೆ ಕೃಪಾಕರ ಸೇನಾನಿ ಅವರಿಂದ ವಿಚಾರಗೋಷ್ಠಿ ನಡೆಯಲಿದೆ. ಅಪರಾಹ್ನ 12:10ರಿಂದ 1 ಗಂಟೆಯವರೆಗೆ ಕೃಪಾಕರ ಸೇನಾನಿ ನಿರ್ದೇಶನದ ‘ವಾಕಿಂಗ್ ವಿಥ್ ವೋಲ್ಫ್’ ಸಾಕ್ಷ್ಯಚಿತ್ರ ಪ್ರದರ್ಶನ ಜರಗಲಿದೆ.
ಅಪರಾಹ್ನ 2ರಿಂದ 4 ಗಂಟೆಯವರೆಗೆ ವಿಜ್ಞಾನ ಪೀಠ ಕಾರ್ಯಕ್ರಮದಲ್ಲಿ ಕೃಪಾಕರ ಸೇನಾನಿ ಅವರ ಬದುಕು ಅನುಭವ ಕಥನ ಹಾಗೂ ಸಂವಾದ ನಡೆ ಯಲಿದೆ. ಸಂಜೆ 4ರಿಂದ 6:30ರ ವರೆಗೆ ಕೃಪಾಕರ ಸೇನಾನಿ ಅಧ್ಯಕ್ಷತೆಯಲ್ಲಿ ನಡೆಯುವ ‘ಹಸಿರು ಸಂವೇದನೆ’ ವಿಶೇಷ ಚರ್ಚೆಯಲ್ಲಿ ಮೈಸೂರಿನ ವನ್ಯಜೀವಿ ಜೀವಶಾಸ್ತ್ರಜ್ಞ ಎಸ್.ಎಸ್.ಸುನೀಲ್, ಹೋರಾಟಗಾರ ದಿನೇಶ್ ಹೊಳ್ಳ, ಉರಗ ತಜ್ಞ ಗುರುರಾಜ್ ಸನಿಲ್, ಪಕ್ಷಿ ತಜ್ಞ ಶಿವಶಂಕರ್ ಮಂಜುನಾಥ್, ಪರಿಸರ ಚಿಂತಕ ಪುರುಷೋತ್ತಮ ಅಡ್ವೆ ಭಾಗವಹಿಸಲಿರುವರು.
ಸಂಜೆ 7ರಿಂದ 7:30ರವರೆಗೆ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸುವ ಪಂಚವಟಿ ಏಕಾಂಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.







