ಕಿಡ್ನಿ ಸಮಸ್ಯೆಯ ರೋಗಿಗೆ ಪರ್ಯಾಯ ಕಿಡ್ನಿ : ಯೆನೆಪೊಯ ವೈದ್ಯರ ತಂಡದಿಂದ ಸಾಧನೆ
ಮಿದುಳು ನಿಷ್ಕ್ರೀಯ ವ್ಯಕ್ತಿಯ ಕಿಡ್ನಿದಾನ

ಮಂಗಳೂರು, ಆ. 26: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗಳಿಗೆ ಅಂಗಾಂಗ ದಾನ ಮಾಡಿದ ವ್ಯಕ್ತಿಯ ಪರ್ಯಾಯ ಕಿಡ್ನಿ ಜೋಡಣೆಯನ್ನು ಯೆನೆಪೊಯ ವೈದ್ಯಕೀಯ ತಂಡ ಯಶಸ್ವಿಯಾಗಿ ಮಾಡಿದೆ ಎಂದು ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರಾದ ಡಾ.ಸಂತೋಷ್ ಪೈ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಕಳೆದ 5 ವರ್ಷಗಳಿಂದ ಎರಡು ಕಿಡ್ನಿ ಪೈಫಲ್ಯ ಹೊಂದಿದ್ದ ರೋಗಿಯೊಬ್ಬರಿಗೆ ಮಿದುಳು ನಿಷ್ಕ್ರೀಯ ಗೊಂಡ ವ್ಯಕ್ತಿಯೊಬ್ಬರ ಕುಟುಂಬ ಅಂಗಾಂಗ ದಾನ ಮಾಡಿದ ಕಾರಣ ಆತನ ಕಿಡ್ನಿಯನ್ನು ಕಸಿಮಾಡಿ ಜೋಡಿಸಿದ ಪರಿಣಾಮವಾಗಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿ ಸಂಪೂರ್ಣ ಗುಣ ಮುಖರಾಗಿದ್ದಾರೆ ಎಂದು ಡಾ.ಸಂತೋಷ್ ಪೈ ತಿಳಿಸಿದ್ದಾರೆ.
ಇದಲ್ಲದೆ ಇನ್ನೂ ಎರಡು ಪ್ರಕರಣದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ರೋಗಿಗಳಿಗೆ ಅವರ ಹೆತ್ತವರೇ ಕಿಡ್ನಿ ದಾನ ಮಾಡಿದ ಕಾರಣ ಸಮಸ್ಯೆಯಿಂದ ಬಳಲುತ್ತಿದ್ದ ಆ ಇಬ್ಬರು ರೋಗಿಗಳು ಗುಣ ಮುಖರಾಗಿದ್ದಾರೆ. ದೇಶದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಿಡ್ನಿ ದಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯೂ ಜನಸಾಮಾನ್ಯರಲ್ಲಿದೆ. ಈ ಹಿನ್ನೆಲೆಯಲ್ಲಿ ಮಿದುಳು ನಿಷ್ಕ್ರೀಯ ಗೊಂಡ ಸಂದರ್ಭದಲ್ಲಿ ಮಾಡುವ ಅಂಗಾಂಗ ದಾನದಿಂದ ಹಲವು ಮಂದಿಗೆ ಮರು ಹುಟ್ಟು ನೀಡಿದಂತಾಗುತ್ತದೆ. ಪ್ರತಿದಿನ ಯೆನೆಪೊಯ ದೇರಳ ಕಟ್ಟೆ ಆಸ್ಪತ್ರೆಗೆ ಡಯಾಲೀಸಿಸ್‌ಗಾಗಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸುಮಾರು 50 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಇಂತಹ ರೋಗಿಗಳು ಜೀವನವಿಡಿ ಈ ಸಮಸ್ಯೆಯಿಂದ ಬಳಲುತ್ತಿರಬೇಕಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಿಡ್ನಿ ಕಸಿ. ವೈದ್ಯಕೀಯ ರಂಗದಲ್ಲಿ ಆಗಿರುವ ಆಧುನಿಕ ತಂತ್ರಜ್ಞಾನದ ಆವಿಷ್ಕಾರದಿಂದ ಕಿಡ್ನಿ ಕಸಿ ಮೂಲಕ ಸಮಸ್ಯೆಗೆ ಕ್ಷಿಪ್ರಗತಿಯ ಪರಿಹಾರ ಕಂಡು ಕೊಳ್ಳಲು ಸಹಕಾರಿಯಾಗಿದೆ. ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡುವ ಆಧುನಿಕ ತಂತ್ರಜ್ಞಾನ ರೋಬೊಟೆಕ್ ತಂತ್ರಜ್ಞಾನ ಲಭ್ಯವಿದೆ ಎಂದು ಡಾ. ಪದ್ಮನಾಭ ತಿಳಿಸಿದ್ದಾರೆ.
‘ಮರು ಹುಟ್ಟು ಪಡೆದಂತಾಗಿದೆ ’
ನನ್ನ ತಂದೆ ಕಳೆದ ಐದು ವರ್ಷ ಗಳಿಂದ ಕಿಡ್ನಿ ವೈಫಲ್ಯದಿಂದ ಡಯಾಲಿಸೀಸ್ ಗಾಗಿ ತಿಂಗಳಲ್ಲಿ ಹಲವು ದಿನ ಆಸ್ಪತ್ರೆಗೆ ಬರಬೇಕಾಗಿತ್ತು.ಈ ಚಿಕಿತ್ಸೆಯಿಂದ ಅವರು ಹಿಂಸೆ ಅನುಭವಿಸುತ್ತಿದ್ದರು.ಈಗ ಅಂಗಾಂಗ ದಾನದಿಂದ ದೊರೆತ ಕಿಡ್ನಿಯಿಂದ ಅವರಿಗೆ ಯೆನೆಪೊಯ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಯಿತು. ಈಗ ಅವರ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರಿಗೆ ಮರು ಹುಟ್ಟು ಪಡೆದಂತಾಗಿದೆ ಎಂದು ಹೇಳುತ್ತಿದ್ದಾರೆ ಎಂದು ರೋಗಿಯ ಪುತ್ರರೊಬ್ಬರು ತಮ್ಮ ಅನುಭವ ಹಂಚಿಕೊಂಡರು.
‘‘ನನ್ನ ತಾಯಿ ನನಗೆ ಕಿಡ್ನಿ ದಾನ ಮಾಡಿದ ಕಾರಣ ನಾನು ಬದುಕಿದ್ದೇನೆ ಯೆನೆಪೊಯ ಆಸ್ಪತ್ಯೆಯಲ್ಲಿ ಕಿಡ್ನಿ ಕಸಿ ಚಿಕಿತ್ಸೆ ಪಡೆದ ಬಳಿಕ ನಾನು ಚೆನ್ನಾಗಿದ್ದೇನೆ. ನನ್ನ ತಾಯಿಯೂ ಆರೋಗ್ಯವಾಗಿದ್ದಾರೆ ಎಂದು ಬೆಳ್ತಂಗಡಿಯ ರೋಗಿಯೊಬ್ಬರು ತಮ್ಮ ಅನುಭವ ಹಂಚಿಕೊಂಡರು.
‘‘ನನ್ನ ತಂದೆಗೆ 55ವರ್ಷ ನನಗೆ ಅವರ ಒಂದು ಕಿಡ್ನಿ ದಾನ ಮಾಡಿದ್ದಾರೆ. ಅದರಿಂದ ಹೊಸ ಬದುಕು ದೊರೆತಿದೆ. ನಾನು ಚಾಲಕ ವೃತ್ತಿಯಲ್ಲಿರುವವ ಕಿಡ್ನಿ ಪೈಫಲ್ಯದಿಂದ ಡಯಾಲೀಸ್‌ಸ್ ಮಾಡಲು ಬಂದು ಬಂದು ನನ್ನ ಬದುಕು ನರಕವಾಗಿತ್ತು ಈಗ ಯೆನೆಪೊಯ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಆದ ಬಳಿಕ ಮತ್ತೆ ನಾನು ಚಾಲಕನಾಗಿ ಆಟೋ ಓಡಿಸುತ್ತೇನೆ. ತಂದೆ ಹುಷಾರಾಗಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ರೋಗಿಯೊಬ್ಬರು ತಮ್ಮ ಅನುಭವ ಹಂಚಿಕೊಂಡರು.
ನಾನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಯೆನೆಪೊಯ ಆಸ್ಪತ್ರೆಯಲ್ಲಿ ರೊಬೊಟೆಕ್ ತಂತ್ರಜ್ಞಾನದಿಂದ ನನಗೆ ಕಿಡ್ನಿ ಕಸಿ ಮಾಡಲಾಗಿದೆ.ನಾಲ್ಕೆ ದಿನಗಳಲ್ಲಿ ನಾನು ಆಸ್ಪತ್ರೆಯಿಂದ ಮನೆಗೆ ತೆರಳುವಂತಾಗಿದೆ. ಈಗ ನಾನು ಗುಣಮುಖನಾಗಿದ್ದೇನೆ ಎಂದು ನಾಝಿರ್ ಪಾಶಾ ತಮ್ಮ ಅನುಭವಹಂಚಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಚಿಕಿತ್ಸೆ ನಡೆಸಿದ ವೈದ್ಯರ ತಂಡದ ಸದಸ್ಯರಾದ ಡಾ. ಮುಜೀಬ್ ರಹ್ಮಾನ್, ಡಾ.ನಿಶ್ಚಿತ್ ಡಿ ಸೋಜ, ಡಾ. ಪದ್ಮನಾಭ ಭಟ್, ಡಾ.ತಿಪ್ಪೆ ಸ್ವಾಮಿ, ಡಾ. ಅಲ್ತಾಫ್ ಖಾನ್, ವಿಭಾಗದ ಸಂಯೋಜಕರಾದ ನೆಲ್ವಿನ್ ನೆಲ್ಸನ್ ಮೊದಲಾದವರು ಉಪಸ್ಥಿತರಿದ್ದರು.







