ವಿದ್ಯುತ್ ಉಪಕರಣ ಕಳವು ಪ್ರಕರಣ: ಆರೋಪಿ ಬಂಧನ
ಮೂರು ಲಕ್ಷ ರೂ. ಮೌಲ್ಯದ ಸೊತ್ತು ವಶ

ಮಂಗಳೂರು, ಆ. 26: ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿನ ಸಂಸ್ಥೆಯೊಂದರ ವಿದ್ಯುತ್ ಉಪಕರಣ (Stainless Steel Glands) ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಜ್ಪೆ ಪೊಲೀಸರು ಮುರ ನಗರದಲ್ಲಿ ಬಂಧಿಸಿದ್ದಾರೆ.
ಬಜ್ಪೆ ನಿವಾಸಿ ಮುಹಮ್ಮದ್ ಶಮೀರ್ ಯಾನೆ ಚೆರಿಯೋನು (30) ಬಂಧಿತ ಆರೋಪಿ.
ಪ್ರಕರಣ ವಿವರ
ವಿದ್ಯುತ್ ಕೆಲಸಗಳನ್ನು ಗುತ್ತಿಗೆ ಆಧಾರದಲ್ಲಿ ನಿರ್ವಹಿಸುವ ಇವಿಯೋ ಪ್ರೈ.ಲಿ. ಸಂಸ್ಥೆಗೆ ಸಂಬಂಧಿಸಿದ ವಿದ್ಯುತ್ ಉಪಕರಣಗಳನ್ನು ತಾತ್ಕಾಲಿಕ ಶೆಡ್‌ನಲ್ಲಿ ಬೀಗ ಹಾಕಿ ಇರಿಸಲಾಗಿತ್ತು. ಆ. 20ರಂದು ಬೆಳಗ್ಗೆ ಶೆಡ್‌ನ ಬೀಗ ಮುರಿದಿರುವುದು ಸಂಸ್ಥೆಯ ಇನ್‌ಚಾರ್ಜ್ ಸತೀಶ್ ಅವರ ಗಮನಕ್ಕೆ ಬಂದಿದೆ. ಶೆಡ್‌ನ ಒಳಪ್ರವೇಶಿಸಿ ಪರಿಶೀಲಿಸಿದಾಗ ವಿವಿಧ ಅಳತೆಯ ವಿದ್ಯುತ್ ಕೆಲಸಕ್ಕೆ ಅಗತ್ಯವಾದ 2.11 ಲಕ್ಷ ರೂ. ಮೌಲ್ಯದ 601 ವಿದ್ಯುತ್ ಉಪಕರಣಗಳು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತ ಆರೋಪಿಯಿಂದ 30 ವಿದ್ಯುತ್ ಉಪಕರಣಗಳು, ಒಂದು ಪಿಕ್‌ಅಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಸ್ವಾಧೀನಪಡಿಸಿಕೊಳ್ಳಲಾದ ಸೊತ್ತುಗಳ ಮೌಲ್ಯ 3.10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಆದೇಶದಂತೆ ಡಿಸಿಪಿಗಳಾದ ಅರುಣಾಂಶು ಗಿರಿ, ಲಕ್ಷ್ಮೀಗಣೇಶ್ ಹಾಗೂ ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಗೌಡ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಜ್ಪೆ ಠಾಣಾ ಪೊಲೀಸ್ ನಿರೀಕ್ಷಕ ಕೆ.ಆರ್. ನಾಯಕ್, ಪಿಎಸ್ಸೈ ಸತೀಶ್ ಎಂ.ಪಿ., ಸಹಾಯಕ ಉಪನಿರೀಕ್ಷಕ ರಾಮ ಪೂಜಾರಿ, ಎಚ್.ಸಿ. ಗಳಾದ ಚಂದ್ರಮೋಹನ್, ರಾಜೇಶ್, ಸುಧೀರ್ ಶೆಟ್ಟಿ, ಸತ್ಯನಾರಾಯಣ ಕೆ., ಪುರುಷೋತ್ತಮ, ಸಂತೋಷ್ ಸುಳ್ಯ, ಪಿಸಿಗಳಾದ ಮಂಜುನಾಥ, ವಕೀಲ ಲಮಾಣಿ, ಕುಮಾರಸ್ವಾಮಿ ಭಾಗವಹಿಸಿದ್ದರು.







