ವೆನ್ಲಾಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ತ್ವರಿತಕ್ಕೆ ಡಿಸಿ ಸೂಚನೆ

ಮಂಗಳೂರು, ಆ.26: ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ತ್ವರಿತಗತಿಯಿಂದ ದುರಸ್ತಿ ಕಾಮಗಾರಿ ಕೈಗೊಂಡು ಒಂದು ವಾರದಲ್ಲಿ ವರದಿ ಸಲ್ಲಿಸಬೇಕು. ಕಾಮಗಾರಿ ಸಂದರ್ಭದಲ್ಲಿ ರೋಗಿಗಳಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಆರೋಗ್ಯ ರಕ್ಷಾ ಸಮಿತಿ, ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆ ಇದರ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಯಿಂದಾಗಿ ಸಣ್ಣಪುಟ್ಟ ಹಾನಿಗೊಂಡಿರುವ ಆಸ್ಪತ್ರೆಯ ಕಟ್ಟಡದ ದುರಸ್ತಿ ಕಾಮಗಾರಿ ತುರ್ತಾಗಿ ಪೂರ್ಣಗೊಳ್ಳಬೇಕು. ನೂತನವಾಗಿ ನಿರ್ಮಿಸಲಾಗಿರುವ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ಒಂದು ತಿಂಗಳ ಅವಧಿಯೊಳಗಾಗಿ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಚ್ಚುವರಿಗಾಗಿ 24 ಹಾಸಿಗೆ ಸಾಮರ್ಥ್ಯದ ಐಸಿಯು ವಾರ್ಡ್‌ಗೆ ಸುಮಾರು 100 ಶುಶ್ರೂಷಕಿಯರು, 100 ಜನ ಗ್ರೂಪ್ ಡಿ, 3 ಐಸಿಯು ಸ್ಪೆಷಲಿಸ್ಟ್, 4 ಐಸಿಯು ಟೆಕ್ನೀಷಿಯನ್, 4 ಲ್ಯಾಬ್ ಟೆಕ್ನೀಷಿಯನ್ ಅಗತ್ಯವಾಗಿ ಬೇಕಾಗಿದ್ದಾರೆ. ಹಾಗಾಗಿ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದರು.
ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕದ ಯೋಜನೆಗಳು ಜನಸಾಮಾನ್ಯರಿಗೆ ಸಮರ್ಪಕವಾಗಿ ದೊರಕಲು ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚು ಗಮನಹರಿಸಲು ಜಿಲ್ಲಾಧಿಕಾರಿ ಹೇಳಿದರು.
ವೆನ್ಲಾಕ್ ಅಧೀಕ್ಷಕಿ ಡಾ.ರಾಜೇಶ್ವರಿದೇವಿ ಅವರು ವೆನ್ಲಾಕ್ ಜಿಲ್ಲಾಸ್ಪತ್ರೆಯ ವಾರ್ಷಿಕ ಆಯವ್ಯಯ ಮತ್ತು ಹಲವಾರು ಆರೋಗ್ಯ ಯೋಜನೆಗಳ ಮೂಲಕ ಫಲಾನುಭವಿಗಳಿಗೆ ದೊರೆತ ಸೌಲಭ್ಯಗಳ ವರದಿ ಮತ್ತು ಸಭೆಯಲ್ಲಿ ಆಸ್ಪತ್ರೆಯ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದರು.
ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಸಿಂಧ್ಯಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಕೆಎಂಸಿ ಆಸ್ಪತ್ರೆಯ ಡೀನ್ ಡಾ.ಪ್ರಭು ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.







