ಬ್ರಹ್ಮಾವರ: ಹಣ್ಣಿನ ಕೃಷಿಯಲ್ಲಿ ತರಬೇತಿ ಕಾರ್ಯಕ್ರಮ

ಉಡುಪಿ, ಆ.26: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಹಣ್ಣಿನ ಕೃಷಿಯ ಕುರಿತಂತೆ ಆಸಕ್ತ ರೈತರಿಗಾಗಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭೂಸಮೃದ್ಧಿ ಯೋಜನೆಯಿಂದ ನಾವು ಸಾಕಷ್ಟು ಯಶಸ್ಸನ್ನು ಕಂಡಿದ್ದು, ಹಲವಾರು ರೈತರು ಭತ್ತದ ನೇರ ಬಿತ್ತನೆ ಬೇಸಾಯ ಪದ್ದತಿಯಿಂದ ಸಫಲತೆಯನ್ನು ಕಂಡಿದ್ದಾರೆ. ವಿಶ್ವದಾ ದ್ಯಂತ ಬೆಳಕಿಗೆ ಬರುತ್ತಿರುವ ಆಧುನಿಕ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಳ್ಳಬೇಕು. ಹೊಸ ವಿಧಾನವನ್ನು ಅಳವಡಿಸಿಕೊಳ್ಳುವುದರಿಂದ ಕೃಷಿಯಲ್ಲಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ ಎಂದರು.
ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ಮತ್ತು ಸಹ ಸಂಶೋಧನಾ ನಿರ್ದೇಶಕ ಡಾ. ಎಸ್. ಯು. ಪಾಟೀಲ್ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿ ರೈತರಲ್ಲಿ ಕೃಷಿ ಆಸಕ್ತಿ ಉತ್ತಮವಾಗಿದ್ದು, ಹಣ್ಣು ಕೃಷಿಗೆ ಬಹಳಷ್ಟು ಜಾಗದ ಅವಶ್ಯಕತೆ ಇರುವುದಿಲ್ಲ. ಹೊಸ ಹೊಸ ಹಣ್ಣುಗಳನ್ನು ಬೆಳೆಯಲು ಪ್ರಯತ್ನಿಸಬೇಕು ಎಂದು ರೈತರಿಗೆ ಮನದಟ್ಟು ಮಾಡಲು ಪ್ರಯತ್ನಿಸಿದರು.
ಬೆಂಗಳೂರು ಐಐಎಚ್‌ಆರ್‌ನ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಪಿ.ಸಿ. ತ್ರಿಪಾಠಿ ಮಾತನಾಡಿ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಕೃಷಿಯಲ್ಲಿ ಸಫಲತೆ ಕಾಣಲು ಮೊದಲ ಹೆಜ್ಜೆ ಎಂದರು. ಬಾಳೆ, ಮಾವು ಅಷ್ಟೇ ಅಲ್ಲದೇ ತಮ್ಮ ತಮ್ಮ ಜಾಗದಲ್ಲಿ ಬೆಳೆಯಲು ಸಾಧ್ಯವಾಗುವ ಎಲ್ಲಾ ಹಣ್ಣುಗಳನ್ನು ಬೆಳೆಯಲು ಪ್ರಯತ್ನಿಸಬೇಕು ಎಂದು ಹಣ್ಣು ಕೃಷಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಉಡುಪಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಮಾತನಾಡಿ, ರೈತರು ಸಾಮಾನ್ಯವಾಗಿ ಹಿಂದಿನಿಂದಲೂ ಬರೀ ತೆಂಗು, ಅಡಿಕೆ, ಮಾವು, ಹಲಸು ಇವುಗಳನಷ್ಟೇ ಬೆಳೆಯುತ್ತಿದ್ದಾರೆ ಇದಲ್ಲದೇ ಹೊಸ ಹೊಸ ಬೆಳೆಗಳನ್ನು ಕೂಡ ಬೆಳೆಸಬೇಕು. ಉದಾಹರಣೆಗೆ ಅವಾಕಾಡೊ, ರಾಂಬುಟಾನ್, ಪಪ್ಪಾಯ, ಸೀಬೆ ಇಂತಹ ಹಣ್ಣುಗಳನ್ನು ಬೆಳೆಯಬೇಕು ಎಂದರು. ಹಾಗೆ ಇಂತಹ ಕಾರ್ಯಕ್ರಮಗಳು ರೈತರಿಗೆ ಹೊಸ ವಿಧಾನಗಳು, ಹೊಸ ವಿಷಯ ಗಳನ್ನು ತಿಳಿದುಕೊಳ್ಳಲು ಸಾಯ ಮಾಡುತ್ತದೆ ಎಂದು ತಿಳಿಸಿದರು.
ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸುಧೀರ್ ಕಾಮತ್ ಮಾತನಾಡಿ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಜಾರಿಗೆ ಬಂದ ಮೇಲೆ ತೋಟಗಾರಿಕೆ ಉತ್ಪಾದನೆ ಜಾಸ್ತಿಯಾಗಿದೆ. ಇದು ಒಂದು ಉತ್ತಮ ಬೆಳವಣಿಗೆ. ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಕೃಷಿಯಲ್ಲಿ ಉತ್ತಮ ಲಾಭಗಳಿಸಬಹುದು. ಹಾಗೆಯೇ ನಮ್ಮ ದೇಶ ಮಾವು, ಹಲಸು ಬೆಳೆಯಲ್ಲಿ ಪ್ರಪಂಚದಲ್ಲೇ ಒಂದನೇ ಸ್ಥಾನದಲ್ಲಿದೆ. ಕಡಿಮೆ ಕ್ಷೇತ್ರದಲ್ಲಿ ಒಳ್ಳೆಯ ಲಾಭ ಕೊಡುವಂತದ್ದು ಹಣ್ಣಿನ ಕೃಷಿ. ನಮ್ಮ ದೇಶದಲ್ಲಿ ಎಲ್ಲಾ ರೀತಿಯ ಹಣ್ಣುಗಳನ್ನು ಬೆಳೆಯುವ ಅವಕಾಶ ಇದೆ, ಇದಕ್ಕೆ ಕಾರಣ ನಮ್ಮ ದೇಶದ ವಾತಾವರಣ ಕಾರಣ ಎಂದರು.
ಬೆಂಗಳೂರು ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದ ಪ್ರಧಾನ ಜ್ಞಾನಿ ಡಾ.ಆರ್.ಸೆಂಥಿಲ್‌ಕುಮಾರ್, ಬೆಂಗಳೂರು ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಕಲೈವಣ್ಣನ್ ಕರಾವಳಿ ಪ್ರದೇಶದಲ್ಲಿ ಬೆಳೆಸಬಹುದಾದ ವಿವಿಧ ಹಣ್ಣಿನ ಬೆಳೆಗ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಕೆ.ವಿ.ಕೆ ಬ್ರಹ್ಮಾವರದ ತೋಟಗಾರಿಕಾ ವಿಜ್ಞಾನಿ ಚೈತನ್ಯ ಹೆಚ್. ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಎನ್.ಈ. ನವೀನ್‌ನಿರೂಪಿಸಿದರು. ಡಾ. ಜಯಪ್ರಕಾಶ್ ಆರ್. ವಂದಿಸಿದರು.








