ಬೆಂಗಳೂರು: 50 ಪಾದಚಾರಿ ವ್ಯಾಪಾರ ಮಳಿಗೆಗಳ ತೆರವು
ಬೆಂಗಳೂರು, ಆ.26: ಮಹದೇವಪುರದಲ್ಲಿನ ಹೊರ ವರ್ತುಲ ರಸ್ತೆ ಮತ್ತು ಮಾರತ್ತಹಳ್ಳಿ ಪಾದಚಾರಿ ಮಾರ್ಗದಲ್ಲಿರುವ 50 ವ್ಯಾಪಾರ ಮಳಿಗೆಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಕಳೆದ ಒಂದು ವಾರದಲ್ಲಿ ಪಾದಚಾರಿ ರಸ್ತೆಯಲ್ಲಿ ಅಕ್ರಮವಾಗಿ ಅಂಗಡಿ ಇಟ್ಟುಕೊಂಡಿದ್ದ 50 ವ್ಯಾಪಾರ ಮಳಿಗೆಗಳನ್ನು ಬಿಬಿಎಂಪಿ ತೆರವು ಮಾಡಿದೆ. ಕಳೆದ ವರ್ಷವೂ ಬಿಬಿಎಂಪಿ ಇದೇ ರೀತಿ ಮಹದೇವಪುರದಲ್ಲಿ ವ್ಯಾಪಾರ ಮಳಿಗೆಗಳನ್ನು ತೆರವು ಮಾಡಿತ್ತು. ಆದರೆ, ತೆರವು ಕಾರ್ಯಾಚರಣೆ ಮುಗಿದ ಎರಡು-ಮೂರು ದಿನಗಳಲ್ಲಿ ಮತ್ತೆ ವ್ಯಾಪಾರ ಶುರು ಆರಂಭ ಮಾಡುತ್ತಾರೆ. ಪದೇ ಪದೇ ತೆರವು ನಂತರವೂ ಬೀದಿ ವ್ಯಾಪಾರಿಗಳು ಮತ್ತೆ ಪಾದಚಾರಿ ರಸ್ತೆಯಲ್ಲಿ ವ್ಯಾಪಾರ ಮಳಿಗೆಗಳನ್ನಿಟ್ಟುಕೊಳ್ಳುತ್ತಿದ್ದುದರ ಮೇಲೆ ನಿಗಾ ವಹಿಸದಿರುವ ಪಾಲಿಕೆ ಮಿತಿ ಮೀರಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ.
'ಪಾದಚಾರಿ ಮಾರ್ಗ ಪಾದಚಾರಿಗಳಿಗಿರುವುದಾಗಿದೆ. ನಗರದ ರಸ್ತೆಗಳಲ್ಲಿ ಪಾದಚಾರಿಗಳ ಹಿತಾಸಕ್ತಿ ಮತ್ತು ಸುರಕ್ಷತೆ ಕಾಪಾಡುವ ಹೊಣೆ ನಮ್ಮದು. ಈ ರೀತಿಯ ಕೆಲಸಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ. ಕೆಲವೊಂದು ಬಾರಿ ನಾವು ಬೀದಿ ವ್ಯಾಪಾರಿಗಳಿಗೆ ಎಚ್ಚರಿಕೆಗಳನ್ನು ನೀಡುತ್ತಿರುತ್ತೇವೆ. ನಮ್ಮ ಮಾತು ಕೇಳದೇ ಇದ್ದಾಗ ನಾವೇ ಅಲ್ಲಿಗೆ ಹೋಗಿ ಕೇಸು ದಾಖಲಿಸುತ್ತೇವೆ' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಾರ್ಯಾಚರಣೆ ಮೂಲಕ ಬೀದಿಯನ್ನು ಶಾಶ್ವತ ಮತ್ತು ತಾತ್ಕಾಲಿಕವಾಗಿ ಅತಿಕ್ರಮಣ ಮಾಡಿದ್ದವರನ್ನು ತೆರವುಗೊಳಿಸಲಾಗಿದೆ. ಮುಂದೆಯೂ ನಿಯಮಿತವಾಗಿ ಈ ರೀತಿಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.







