ಮಾಧ್ಯಮಗಳು ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಬೇಕು: ಅನೀಸ್ ಕೌಸರಿ

ಬೆಳ್ತಂಗಡಿ: ಮಾಧ್ಯಮಗಳು ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಬೇಕೇ ಹೊರತು ಒಡೆಯುವ ಕೆಲಸ ಮಾಡಬಾರದು. ಅಮಾಯಕ ವ್ಯಕ್ತಿಗಳನ್ನು ಉಗ್ರಗಾಮಿಯೆಂದು ಬಿಂಬಿಸಿ ಅವರ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ಎಸ್‍ಕೆಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಹೇಳಿದರು.
ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದ ಬಳಿ ಸೋಮವಾರ ಎಸ್.ಕೆ.ಎಸ್.ಎಸ್.ಎಫ್ ಬೆಳ್ತಂಗಡಿ ವಲಯದ ವತಿಯಿಂದ ಅಮಾಯಕರನ್ನು ಭಯೋತ್ಪಾದಕರಾಗಿಸುವುದರ ವಿರುದ್ಧ ಏರ್ಪಡಿಸಲಾಗಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಗೋವಿಂದೂರಿನಲ್ಲಿ ಎಲ್ಲರೂ ಒಳ್ಳೆಯ ಅಭಿಪ್ರಾಯ ಹೇಳುವ ಎಲ್ಲರೊಂದಿಗೂ ಸೇರಿ ಬದುಕುವ ಅಮಾಯಕ ವ್ಯಕ್ತಿಯನ್ನು ಕೆಲಮಾಧ್ಯಮಗಳು ಉಗ್ರಗಾಮಿಯನ್ನಾಗಿ ಬಿಂಬಿಸಿದ್ದಾರೆ. ಇಂತಹ ಬೆಳವಣಿಗೆಗಳು ಸಮಾಜದ ಸ್ವಾಸ್ಥ್ಯವನ್ನು ಕೆಡವುತ್ತದೆ ಹಾಗೂ ಅಶಾಂತಿಗೆ ಕಾರಣವಾಗುತ್ತದೆ. ಇಂತಹ ಪ್ರವೃತ್ತಿಗಳು ಆಗಾಗ ನಡೆಯುತ್ತಿದ್ದು ಇದಕ್ಕೆ ಅವಕಾಶ ನೀಡಬಾರದು, ಅನಗತ್ಯ ಗೊಂದಲ ಸೃಷ್ಟಿಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್‍ಕೆ ಎಸ್‍ಎಸ್‍ಎಫ್ ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷ ಇಬ್ರಾಹಿಂ ಬಾತಿಶ್ ಕೊಡ್ಲಿಪೇಟೆ ಹಾಗೂ ಜಿಲ್ಲಾ ನೇತಾರ ಇಕ್ಬಾಲ್ ಬಾಳಿಲ ಮುಖ್ಯ ಭಾಷಣ ಮಾಡಿದರು. ಜಿಲ್ಲಾಧ್ಯಕ್ಷ ಖಾಸೀಂ ದಾರಿಮಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಬೆಳ್ತಂಗಡಿ ವಲಯ ಅಧ್ಯಕ್ಷ ನಝೀರ್ ಅಝೀಝ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಟನೆಯಲ್ಲಿ ಅಶ್ರಫ್ ಫೈಝಿ, ಹನೀಫ್ ದೂಮಳಿಕೆ, ಬಶೀರ್ ದಾರಿಮಿ, ಸಂಶುದ್ಧೀನ್ ದಾರಿಮಿ, ರಝಾಕ್ ಕನ್ನಡಿಕಟ್ಟೆ, ಸಿರಾಜ್ ಚಿಲಿಂಬಿ, ಅಬ್ಬಾಸ್ ಫೈಝಿ ಕಕ್ಕಿಂಜೆ, ಬಶೀರ್ ವಗ್ಗ, ಅಬ್ಬಾಸ್ ಫೈಝಿ ಬೆಳ್ತಂಗಡಿ, ಹಕೀಂ ಬಂಗೇರಕಟ್ಟೆ, ಇಸಾಕ್ ಕೌಸರಿ, ಯೂಸುಫ್ ಕೌಸರಿ, ಆದಂ ಫೈಝಿ ಮತ್ತಿತರರು ಇದ್ದರು.
ಪ್ರತಿಭಟನೆಯ ಬಳಿಕ ಆಧಾರ ರಹಿತವಾಗಿ ಸುದ್ದಿಗಳನ್ನು ಮಾಡಿ ಸಮಾಜದಲ್ಲಿ ಅಶಾಂತಿಗೆ ಕಾರಣರಾಗುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಎಸ್ಕೆಎಸ್‍ಎಸ್‍ಎಫ್ ಜಿಲ್ಲಾ ಕಾರ್ಯದರ್ಶಿ ಶರೀಫ್ ಕಕ್ಕಿಂಜೆ ಕಾರ್ಯಕ್ರಮ ನಿರ್ವಹಿಸಿದರು. ರಿಯಾಝ್ ಫೈಝಿ ಸ್ವಾಗತಿಸಿದರು.







