ಉಳ್ಳಾಲ: ಹಲವು ಬೇಡಿಕೆಗಳನ್ನು ಮುಂದಿಟ್ಟು ಎಸ್‍ಡಿಪಿಐ ಪ್ರತಿಭಟನೆ

ಉಳ್ಳಾಲ: ನೆರೆ ಸಂತ್ರಸ್ತರನ್ನು ಗುರುತಿಸಿ ಅವರಿಗೆ ಯಾವುದೇ ತಾರತ್ಮಯವಿಲ್ಲದೇ ಪರಿಹಾರ ಕೊಡುವ ಕೆಲಸ ಸರಕಾರದಿಂದ ಆಗಬೇಕಾಗಿದೆ. ಪರಿಹಾರ ನೀಡುವುದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದೇ ಸಮಸ್ಯೆ ಎದುರಾಗಿದ್ದು, ಇದಕ್ಕೆ ಚರಂಡಿ ಒತ್ತುವರಿ ಖಾಲಿ ಮಾಡಿಸಿ ವ್ಯವಸ್ಥೆ ಮಾಡಬೇಕು. ಕಳಪೆ ಕಾಮಗಾರಿಯಿಂದ ಹಾಳಾದ ರಸ್ತೆ ಚರಂಡಿ,ಕಿರು ಸೇತುವೆಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್ ಒತ್ತಾಯಿಸಿದರು.
ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಮಿತಿ ವತಿಯಿಂದ ಉಳ್ಳಾಲ ನಗರ ಸಭೆಯ ದುರಾಡಳಿತ ಮತ್ತು ನೆರೆ ಸಂತ್ರಸ್ತರ ಪರಿಹಾರದಲ್ಲಿ ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿ ಉಳ್ಳಾಲ ನಗರ ಸಭಾ ಕಚೇರಿ ಮುಂಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ನೈಜ ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರವನ್ನು ಸರಕಾರ ರಾಜಕಾರಣಿ, ಬ್ರೋಕರ್ ಗಳಿಗೆ ಅವಕಾಶ ನೀಡದೇ ಕೌನ್ಸಿಲರ್ ಗಳು ಶಿಫಾರಸ್ಸು ಮಾಡಿದ ನೈಜ ಫಲಾನುಭವಿಗಳಿಗೆ ಪರಿಹಾರ ವಿತರಣೆ ಮಾಡಬೇಕು. ಜನವಸತಿ ಪ್ರದೇಶದಲ್ಲಿ ಇರುವ ಅನಧಿಕೃತ ಮೀನಿನ ಗೋಡಾಮು ದುರ್ವಾಸನೆ ಬೀರುವ ಮೀನಿನ ವಾಹನ ಸಾಗಣಿಕೆಗೆ ಅವಕಾಶ ನೀಡಬಾರದು. ನಗರಸಭೆಯಲ್ಲಿ ಕರ್ತವ್ಯಲೋಪ ಮಾಡುವ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು. ನಗರಸಭೆಯ ಸೂಚನಾ ಫಲಕದಲ್ಲಿ ಟೆಂಡರ್ ಪ್ರಕಟಣೆ ಆಯವ್ಯಯ ಇನ್ನಿತರ ಮಾಹಿತಿಗಳನ್ನು ಪ್ರಕಟಿಸಬೇಕು. ನಗರಸಭೆಯ ಟ್ರ್ಯಾಕ್ಟರ್, ಜೆಸಿಬಿ, ರಸ ವಿಲೇವಾರಿ ವಾಹನ ಮತ್ತಿತರ ಸಲಕರಣೆಗಳನ್ನು ಕೂಡಲೇ ದುರಸ್ತಿ ಮಾಡಬೇಕು. ಕುಡಿಯುವ ನೀರು ಅಳವಡಿಕೆ ಕಾಮಗಾರಿ ನಿರ್ವಹಣೆಗೆ ಬೀದಿದೀಪ ಮತ್ತಿತರ ಕಾಮಗಾರಿಗಳ ಬಗ್ಗೆ ಮಾಡಲಾದ ಖರ್ಚುವೆಚ್ಚಗಳ ತನಿಖೆಯಾಗಬೇಕು ಜನರ ತೆರಿಗೆ ಹಣ ದುರುಪಯೋಗ ನಿಲ್ಲಿಸಬೇಕು. ಎಂಟು ವರ್ಷದಿಂದ ಬಾಕಿಯಾಗಿರುವ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕೋಟೆಪುರದಿಂದ ಕುದ್ರು ತನಕ ನೇತ್ರಾವತಿ ನದಿನೀರು ಉಳ್ಳಾಲ ನಗರಕ್ಕೆ ನೆರೆ ನೀರು ಬಾರದಂತೆ ಶಾಶ್ವತ ತಡೆಗೋಡೆ ನಿರ್ಮಿಸಬೇಕು. ಮುಂತಾದ ಹಲವು ಬೇಡಿಕೆಗಳನ್ನಿಟ್ಟು ಧರಣಿ ನಡೆಸಿದ ಎಸ್‍ಡಿಪಿಐ ಈ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್, ಎಸ್.ಡಿ.ಪಿ.ಐ ನಗರಸಮಿತಿ ಅದ್ಯಕ್ಷ ಅಬ್ಬಾಸ್ ಎ.ಆರ್, ಉಪಾಧ್ಯಕ್ಷ ನಿಝಾಂ, ಕಾರ್ಯದರ್ಶಿ ಮುಶರ್ರಫ್ ಉಳ್ಳಾಲ್, ಎಸ್.ಡಿ.ಪಿ.ಐ ಮುಖಂಡರಾದ ಶಾಫಿ ಬಬ್ಬುಕಟ್ಟೆ, ಇಸ್ಮಾಯಿಲ್ ತಲಪಾಡಿ ಪ್ರತಿಭಟನೆಯನ್ನು ಕುರಿತು ಮಾತನಾಡಿದರು. ಕೌನ್ಸಿಲರುಗಳಾದ ರಮೀಝ್, ಅಸ್ಗರ್ ಅಲಿ, ರವೂಫ್, ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.







