ಹಾಂಕಾಂಗ್: ಹಿಂಸೆಗೆ ತಿರುಗಿದ ಪ್ರತಿಭಟನೆ
ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಬೀದಿ ಕಾಳಗ; 36 ಮಂದಿ ಬಂಧನ

ಹಾಂಕಾಂಗ್, ಆ. 26: ಹಾಂಕಾಂಗ್‌ನಲ್ಲಿ ರವಿವಾರ ನಡೆದ ಪ್ರಜಾಪ್ರಭುತ್ವ ಪರ ಪ್ರತಿಭಟನೆಯ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ಸಂಭವಿಸಿದ್ದು, ಪೊಲೀಸರು 36 ಮಂದಿಯನ್ನು ಬಂಧಿಸಿದ್ದಾರೆ.
ಪ್ರತಿಭಟನಕಾರರು ಮತ್ತು ಪೊಲೀಸರ ನಡುವಿನ ಉದ್ವಿಗ್ನತೆ ತಾರಕಕ್ಕೇರಿದಾಗ, ಪ್ರತಿಭಟನಕಾರರು ಪೊಲೀಸರತ್ತ ಪೆಟ್ರೋಲ್ ಬಾಂಬ್ (ಪೆಟ್ರೋಲ್ ತುಂಬಿದ ಗಾಜಿನ ಬಾಟಲಿಗೆ ಬೆಂಕಿ ಕೊಟ್ಟು ಎಸೆಯುವುದು)ಗಳನ್ನು ಎಸೆದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಪ್ರತಿಭಟನಕಾರರ ಮೇಲೆ ಜಲಫಿರಂಗಿ ಧಾರೆಯನ್ನು ಹರಿಸಿದರು ಹಾಗೂ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.
ಹಾಂಕಾಂಗ್‌ನ ಆರೋಪಿಗಳನ್ನು ವಿಚಾರಣೆಗಾಗಿ ಮಾತೃಭೂಮಿ ಚೀನಾಕ್ಕೆ ಗಡಿಪಾರು ಮಾಡುವ ಹಾಂಕಾಂಗ್‌ನ ಮಸೂದೆಯನ್ನು ವಿರೋಧಿಸಿ ಪ್ರತಿಭಟನಕಾರರು ಮೂರು ತಿಂಗಳಿನಿಂದ ಬೀದಿಗಿಳಿದು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಅಂದಿನಿಂದ ಜೊತೆಜೊತೆಯಾಗಿ ಪ್ರಜಾಪ್ರಭುತ್ವ ಪರ ಚಳವಳಿಯೂ ನಡೆಯುತ್ತಿದೆ.
ರವಿವಾರ ಸಂಜೆ ಇಟ್ಟಿಗೆಗಳು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಎಸೆದ ಪ್ರತಿಭಟನಕಾರರ ಮೇಲೆ ಪೊಲೀಸರು ಜಲಫಿರಂಗಿ ಧಾರೆ ಹರಿಸಿದರು ಹಾಗು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.
ಪ್ರತಿಭಟನಕಾರರು ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡಿದರು. ನಗರದ ಎಲ್ಲಾ ಕಡೆ ಓಡಾಡಿದ ಪ್ರತಿಭಟನಕಾರರು, ಕೆಲವು ರಸ್ತೆಗಳನ್ನು ಮುಚ್ಚುವುದಕ್ಕಾಗಿ ರಸ್ತೆ ತಡೆಗಳನ್ನು ಏರ್ಪಡಿಸಿದರು.
ಇದಕ್ಕೂ ಮೊದಲು, ಬೆಳಗ್ಗಿನ ಅವಧಿಯಲ್ಲಿ ಪ್ರತಿಭಟನೆಯು ಬಹುತೇಕ ಶಾಂತಿಯುತವಾಗಿತ್ತು.
ಅಕ್ರಮ ಕೂಟ, ಆಕ್ಷೇಪಾರ್ಹ ಆಯುಧಗಳ ಬಳಕೆ ಮತ್ತು ಪೊಲೀಸರಿಗೆ ಹಲ್ಲೆ ಮಾಡಿದ ಆರೋಪಗಳಲ್ಲಿ 29 ಪುರುಷರು ಮತ್ತು 7 ಮಹಿಳೆಯರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪೊಲೀಸರಿಂದ ಗಾಳಿಯಲ್ಲಿ ಗುಂಡು
ಆರು ಪೊಲೀಸ್ ಅಧಿಕಾರಿಗಳು ತಮ್ಮ ಪಿಸ್ತೂಲುಗಳನ್ನು ಸೊಂಟದಿಂದ ಎಳೆದುಕೊಂಡರು ಹಾಗೂ ಓರ್ವ ಅಧಿಕಾರಿ ಗಾಳಿಯಲ್ಲಿ ಎಚ್ಚರಿಕೆಯ ಗುಂಡು ಹಾರಿಸಿದರು ಎಂದು ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದರು.
‘‘ಪ್ರತಿಭಟನಕಾರರ ಕಾನೂನುಬಾಹಿರ ಮತ್ತು ಹಿಂಸಾತ್ಮಕ ಕೃತ್ಯಗಳು ಆಕ್ರೋಶ ಹುಟ್ಟಿಸುವುದು ಮಾತ್ರವಲ್ಲ, ಅವುಗಳು ಹಾಂಕಾಂಗನ್ನು ಅತ್ಯಂತ ಅಪಾಯಕಾರಿ ಪರಿಸ್ಥಿತಿಗಡೆ ತಳ್ಳುತ್ತಿವೆ’’ ಎಂದು ಸರಕಾರ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.







