ಜಿ7 ಶೃಂಗ ಸಭೆಯಲ್ಲಿ ಪ್ರತ್ಯಕ್ಷರಾದ ಇರಾನ್ ವಿದೇಶ ಸಚಿವ!

ಬಿಯಾರಿಟ್ಝ್ (ಫ್ರಾನ್ಸ್), ಆ. 26: ಫ್ರಾನ್ಸ್‌ನ ಬಿಯಾರಿಟ್ಝ್ ಪಟ್ಟಣದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ರವಿವಾರ ಭಾಗವಹಿಸಿದ್ದಾರೆ.
ಅವರು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಸೇರಿದಂತೆ ಜಿ7 ದೇಶಗಳ ಮುಖ್ಯಸ್ಥರೊಂದಿಗೆ ಮೂರು ಗಂಟೆಗಳಿಗೂ ಅಧಿಕ ಕಾಲ ಮಾತುಕತೆ ನಡೆಸಿದರು. ಬಳಿಕ ಅವರು ಇರಾನ್‌ಗೆ ವಾಪಸಾಗಿದ್ದಾರೆ.
‘‘ಮುಂದಿನ ದಾರಿ ಕಠಿಣವಾಗಿದೆ. ಆದರೆ, ಪ್ರಯತ್ನಿಸಬಹುದಾಗಿದೆ’’ ಎಂದು ಝಾರಿಫ್ ಟ್ವೀಟ್ ಮಾಡಿದ್ದಾರೆ.
ಫ್ರಾನ್ಸ್‌ನ ನಾಯಕರನ್ನು ಭೇಟಿಯಾಗುವುದರ ಜೊತೆಗೆ, ಜರ್ಮನಿ ಮತ್ತು ಬ್ರಿಟನ್‌ಗಳ ಅಧಿಕಾರಿಗಳಿಗೆ ಜಂಟಿಯಾಗಿ ವಿವರಣೆಯನ್ನು ನೀಡಿರುವುದಾಗಿ ಅವರು ಹೇಳಿದ್ದಾರೆ.
ಜಿ7 ನಾಯಕರು ಶನಿವಾರ ರಾತ್ರಿಯ ಊಟದ ವೇಳೆ ಇರಾನ್ ಬಗ್ಗೆ ಚರ್ಚೆ ನಡೆಸಿದ್ದು, ಕೊಲ್ಲಿಯಲ್ಲಿ ನೆಲೆಸಿರುವ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಇದು ಮಹತ್ವದ ಭೇಟಿಯಾಗಿತ್ತು ಎಂಬುದಾಗಿ ಫ್ರಾನ್ಸ್ ಅಧಿಕಾರಿಗಳು ಬಣ್ಣಿಸಿದ್ದಾರೆ.
‘‘ಅಧ್ಯಕ್ಷರು ಮತ್ತು ಝಾರಿಫ್ ನಡುವೆ ನಡೆದ ಮಾತುಕತೆ ಧನಾತ್ಮಕವಾಗಿತ್ತು ಹಾಗೂ ಮುಂದುವರಿಯಲಿವೆ’’ ಎಂದು ಸಭೆಯ ಬಳಿಕ ಫ್ರಾನ್ಸ್ ಅಧಿಕಾರಿಯೊಬ್ಬರು ಹೇಳಿದರು. ಆದರೆ, ಅವರು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು.
ನನ್ನದೇ ವಿಧಾನದಲ್ಲಿ ಮುಂದುವರಿಯುವೆ: ಟ್ರಂಪ್
ಫ್ರಾನ್ಸ್‌ನ ಬಿಯಾರಿಟ್ಝ್‌ನಲ್ಲಿ ನಡೆದ ಜಿ7 ಶೃಂಗ ಸಮ್ಮೇಳನದಲ್ಲಿ ಭಾಗವಹಿಸಲು ಇರಾನ್‌ಗೆ ಫ್ರಾನ್ಸ್ ನೀಡಿರುವ ಆಮಂತ್ರಣದಿಂದ ಆಶ್ಚರ್ಯವಾಗಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಯಾರಿಟ್ಝ್‌ನಲ್ಲಿನ ತನ್ನ ವಾಸ್ತವ್ಯದ ವೇಳೆ ಇರಾನ್ ವಿದೇಶ ಸಚಿವರು ಅಮೆರಿಕದ ಯಾವುದೇ ಅಧಿಕಾರಿಯನ್ನು ಭೇಟಿಯಾಗಿಲ್ಲ ಅವರು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು, ಇರಾನ್ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಫ್ರಾನ್ಸ್‌ನ ಇಂಗಿತವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರೋಕ್ಷವಾಗಿ ತಿರಸ್ಕರಿಸಿದ್ದಾರೆ. ಇರಾನ್ ಜೊತೆ ಮಾತನಾಡುವ ಫ್ರಾನ್ಸ್‌ನ ಪ್ರಯತ್ನಗಳಿಂದ ನನಗೆ ಸಂತೋಷವಾಗಿದೆ, ಆದರೆ ನಾನು ನನ್ನದೇ ವಿಧಾನದಲ್ಲಿ ಮುಂದುವರಿಯುತ್ತೇನೆ ಎಂದು ಅವರು ಹೇಳಿದ್ದಾರೆ.
ಹಲವರನ್ನು ಅಚ್ಚರಿಯಲ್ಲಿ ಕೆಡವಿದ ಫ್ರಾನ್ಸ್ ಅಧ್ಯಕ್ಷ
ರವಿವಾರ ಜಿ7 ಶೃಂಗಸಭೆಗೆ ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್‌ರನ್ನು ಆಹ್ವಾನಿಸುವ ಮೂಲಕ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಹಲವರನ್ನು ಅಚ್ಚರಿಯಲ್ಲಿ ಕೆಡವಿದ್ದಾರೆ.
ಕೊಲ್ಲಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ನಿವಾರಿಸಲು ಈ ಕ್ರಮವು ಸಹಕಾರಿಯಾಗಬಹುದು ಎಂಬ ನಿರೀಕ್ಷೆಯೊಂದಿಗೆ ಅವರು ಈ ಅಸಾಧಾರಣ ಹಾಗೂ ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ.
2015ರಲ್ಲಿ ವಿಶ್ವದ ಪ್ರಬಲ ದೇಶಗಳೊಂದಿಗೆ ಇರಾನ್ ಸಹಿ ಹಾಕಿದ್ದ ಪರಮಾಣು ಒಪ್ಪಂದದಿಂದ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ 2018ರಲ್ಲಿ ಹೊರಹೋದ ಬಳಿಕ, ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಹೆಚ್ಚಿಸಿತ್ತು. ಈ ಬೆಳವಣಿಗೆಯಿಂದ ಉದ್ಭವಿಸಿರುವ ಉದ್ವಿಗ್ನತೆಯನ್ನು ತಣ್ಣಗಾಗಿಸಲು, ಪಾಶ್ಚಿಮಾತ್ಯ ದೇಶಗಳು ಮತ್ತು ಇರಾನ್ ನಡುವೆ ಮಧ್ಯಸ್ಥಿಕೆ ವಹಿಸುವ ಇಂಗಿತವನ್ನು ಮ್ಯಾಕ್ರೋನ್ ಹಲವು ತಿಂಗಳುಗಳಿಂದ ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ಫ್ರಾನ್ಸ್ ಅಧ್ಯಕ್ಷರು ಇರಾನ್ ವಿದೇಶ ಸಚಿವರನ್ನು ಶುಕ್ರವಾರ ಪ್ಯಾರಿಸ್‌ನಲ್ಲಿರುವ ಎಲೈಸೀ ಅರಮನೆಯಲ್ಲಿ ಸ್ವಾಗತಿಸಿದರು.
ಶೃಂಗ ಸಭೆ ನಡೆಯುತ್ತಿರುವ ಬಿಯಾರಿಟ್ಝ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಝಾರಿಫ್ ನಡುವೆ ನೇರ ಮಾತುಕತೆ ನಡೆಯದಿದ್ದರೂ, ಈ ಕ್ರಮವು ಫ್ರಾನ್ಸ್ ಅಧ್ಯಕ್ಷರ ಮುತ್ಸದ್ದಿತನವನ್ನು ಬಿಂಬಿಸುತ್ತದೆ ಎಂಬುದಾಗಿ ವ್ಯಾಖ್ಯಾನಿಸಲಾಗಿದೆ.







