ಬೆಳಗಾವಿ ಪ್ಯಾಂಥರ್ಸ್‌ಗೆ 8 ವಿಕೆಟ್‌ಗಳ ಜಯ
ಮೈಸೂರು, ಆ.26: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಟ್ವೆಂಟಿ-20 ಟೂರ್ನಿಯ 18ನೇ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ವಿರುದ್ಧ ಬೆಳಗಾವಿ ಪ್ಯಾಂಥರ್ಸ್ 8 ವಿಕೆಟ್‌ಗಳ ಜಯ ಗಳಿಸಿದೆ.
ಇಲ್ಲಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 137 ರನ್ ಗಳಿಸಬೇಕಿದ್ದ ಬೆಳಗಾವಿ ಪ್ಯಾಂಥರ್ಸ್ ತಂಡ 17.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಿತು.
ರವಿಕುಮಾರ್ ಸಮರ್ಥ್ ಔಟಾಗದೆ 50 ರನ್(45ಎ, 4ಬೌ,1ಸಿ) ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಭಿನವ್ ಮನೋಹರ್ ಔಟಾಗದೆ 12 ರನ್ ಗಳಿಸಿದರು. ರವಿಕುಮಾರ್ ಮತ್ತು ಮನೋಹರ್ ನಾಲ್ಕನೇ ವಿಕೆಟ್‌ಗೆ ಜೊತೆಯಾಟದಲ್ಲಿ 72 ರನ್ ಸೇರಿಸಿದರು. ರವಿಕುಮಾರ್ ಸಮರ್ಥ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ದಿಕ್ಷಾಂಶು ನೇಗಿ 32 ರನ್ ಜಮೆ ಮಾಡಿದರು. ಬಿಜಾಪುರ ಬುಲ್ಸ್‌ನ ನವೀನ್ ಎಂ.ಜಿ ದಾಳಿಗೆ ಸಿಲುಕಿ ಮೊದಲ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಅರ್ಶದೀಪ್ ಸಿಂಗ್ ಬ್ರಾರ್ (0) ಮತ್ತು ಸ್ಟಾಲಿನ್‌ಹೂವರ್ (7) ಗಳಿಸಿ ಔಟಾದರು. ಬಳಿಕ ದಿಕ್ಷಾಂಶು ನೇಗಿ ಮತ್ತು ರವಿಕುಮಾರ್ ಸಮರ್ಥ್ 50 ರನ್‌ಗಳ ಜೊತೆಯಾಟ ನೀಡಿದರು.
ಇದಕ್ಕೂ ಮೊದಲು ಬೆಳಗಾವಿ ಪ್ಯಾಂಥರ್ಸ್ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿತ್ತು. ಬಿಜಾಪುರ ಬುಲ್ಸ್ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 136 ರನ್ ಗಳಿಸಿತ್ತು.
ಭರತ್ ಚಿಪ್ಲಿ (33) ಮತ್ತು ಭರತ್ ಎನ್.ಪಿ. (ಔಟಾಗದೆ 35) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು.
ಶುಭಾಂಗ್ ಹೆಗ್ಡೆ, ಅವಿನಾಶ್ ಡಿ, ದರ್ಶನ್ ಎಂ.ಬಿ. ತಲಾ 2 ವಿಕೆಟ್, ದಿಕ್ಷಾಂಶು ನೇಗಿ ಮತ್ತು ರಿತೇಶ್ ಭಟ್ಕಳ್ ತಲಾ 1 ವಿಕೆಟ್ ಪಡೆದರು.







