ರಾಜ್ಯದ ರಫ್ತಿನಲ್ಲಿ ಸಣ್ಣ ಉದ್ದಿಮೆಗಳ ಪಾಲು ಅಧಿಕ: ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್

ಬೆಂಗಳೂರು, ಆ.27: ರಾಜ್ಯದಲ್ಲಿನ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳಿಂದು ರಾಜ್ಯದ ರಫ್ತಿನ ಪ್ರಮಾಣದಲ್ಲಿ ಶೇ.50 ರಷ್ಟು ಪಾಲು ಹೊಂದಿವೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ತಿಳಿಸಿದ್ದಾರೆ.
ನಗರದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ ಅಸೋಚಮ್ ಸಂಘಟನೆ ಮಂಗಳವಾರ ಹಮ್ಮಿಕೊಂಡಿದ್ದ 2019ನೇ ಸಾಲಿನ ‘ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳ (ಎಂಎಸ್ಎಂಇ) ರಫ್ತು ಉತ್ತೇಜನ’ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕು ಮತ್ತು ಸೇವೆಗಳ ರಫ್ತಿಯಲ್ಲಿ ಮಹಾರಾಷ್ಟ್ರ ರಾಜ್ಯದ ನಂತರ ನಾವು ದೇಶದಲ್ಲೇ ದ್ವಿತೀಯ ಸ್ಥಾನದಲ್ಲಿದ್ದೇವೆ. ಸೇವಾ ವಲಯದ ರಫ್ತಿನಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಒಟ್ಟು 38 ಲಕ್ಷ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿದ್ದು, ರಾಜ್ಯದ ರಫ್ತಿನ ಪ್ರಮಾಣದಲ್ಲಿ ಶೇ.50ರಷ್ಟು ಪಾಲು ಹೊಂದಿವೆ ಎಂದರು.
ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕೈಗಾರಿಕಾ ನೀತಿಯು 2019ಕ್ಕೆ ಕೊನೆಗೊಳ್ಳಲಿದ್ದು, ಹೊಸ ಕೈಗಾರಿಕಾ ನೀತಿ ರಚನೆ ಪ್ರಕ್ರಿಯೆ ಚಾಲನೆಯಲ್ಲಿದೆ. ಹಾಗಾಗಿ, ರಾಜ್ಯದ ಹೊಸ ಕೈಗಾರಿಕಾ ನೀತಿಯಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಅಭಿವೃದ್ಧಿಗೆ ಮತ್ತು ರ್ತು ಉತ್ತೇಜನಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ವಿಜಯ್ ಭಾಸ್ಕರ್ ಮಾಹಿತಿ ನೀಡಿದರು.
ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಕೈಗಾರಿಕಾ ವಲಯಗಳನ್ನು (ಇಂಡಸ್ಟ್ರಿಯಲ್ ಕ್ಲಸ್ಟರ್) ಅಭಿವೃದ್ಧಿಪಡಿಸಲಾಗಿದೆ. ಎಲ್ಲೆಡೆ ಎಂಎಸ್ಎಂಇಗಳಿಗೆ ಹೆಚ್ಚು ಅವಕಾಶ ಕಲ್ಪಿಸಲಾಗಿದೆ. ಎಂಎಸ್ಎಂಇಗಳ ಅಭಿವೃದ್ಧಿ ಮತ್ತು ರಫ್ತು ಉತ್ತೇಜನಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಅಧಿಕಾರಿಗಳನ್ನು ಅಧ್ಯಯನಕ್ಕೆ ಕಳುಹಿಸಲಾಗಿತ್ತು ಎಂದು ನುಡಿದರು.
ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ರಾಜ್ಯ ಮತ್ತು ದೇಶದಲ್ಲಿ ರಫ್ತು ವಹಿವಾಟು ಕುಸಿದಿದೆ. ಆರ್ಥಿಕ ಹಿಂಜರಿತದಿಂದಾಗಿ ಭಾರಿ ಪ್ರಮಾಣದ ಉದ್ಯೋಗಾವಕಾಶ ನೀಡಿರುವ ಎಂಎಸ್ಎಂಇಗಳು ಬಾಗಿಲು ಮುಚ್ಚುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಸೋಚಮ್ ಕರ್ನಾಟಕ ವಿಭಾಗದ ಮುಖ್ಯಸ್ಥ ಎಸ್.ಸಂಪತರಾಮನ್, ಉಪಾಧ್ಯಕ್ಷ ರಾಮಕುಮಾರ್ ಶೇಷು, ಎನ್ಎಸ್ಐಸಿ ಮುಖ್ಯಸ್ಥ ಪಿ.ರವಿಕುಮಾರ್, ಎಂಎಸ್ಎಂಇ ಇಲಾಖೆ ನಿರ್ದೇಸಕ ಜಿಯಾವುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
2020ರ ಮಾರ್ಚ್ ತಿಂಗಳಲ್ಲಿ ಎಫ್ಕೆಸಿಸಿಐ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ‘ಕೃಷಿ ವಸ್ತು ಪ್ರದರ್ಶನ’ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದ್ದು, ರಾಜ್ಯ ಸರಕಾರ ಸುಮಾರು 4 ಕೋಟಿ ರೂ.ಗಳಷ್ಟು ಅನುದಾನ ನೀಡುವಂತೆ ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ್ ಕೋರಿದರು.
ಕೇಂದ್ರ ಸರಕಾರವು ಚಿನ್ನದ ರಫ್ತಿನ ಮೇಲೆ ವಿಧಿಸಿರುವ ನಿರ್ಬಂಧಗಳಿಂದಾಗಿ ರಾಜ್ಯದ ರಫ್ತು ವಹಿವಾಟು ಕಡಿಮೆಯಾಗಿದೆ. 24 ಕ್ಯಾರಟ್ ಚಿನ್ನಾಭರಣಗಳ ರಫ್ತಿನ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿರುವುದರಿಂದ ರಫ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮೂರು-ನಾಲ್ಕು ವರ್ಷಗಳ ಹಿಂದೆ 5 ಬಿಲಿಯನ್ನಷ್ಟಿದ್ದ ರಫ್ತು, ಇದೀಗ 70 ಮಿಲಿಯನ್ಗೆ ಕುಸಿದಿದೆ.
-ಟಿ.ಎಂ.ವಿಜಯ ಭಾಸ್ಕರ್, ಸರಕಾರದ ಮುಖ್ಯ ಕಾರ್ಯದರ್ಶಿ