ಬಾಲಕಿಯ ಸಾಮೂಹಿಕ ಅತ್ಯಾಚಾರಗೈದು ತಲೆಬೋಳಿಸಿ ಮೆರವಣಿಗೆ ನಡೆಸಿದರು
ಸಂತ್ರಸ್ತೆಗೆ ಶಿಕ್ಷೆ ವಿಧಿಸಿದ ಪಂಚಾಯತ್

ಪಾಟ್ನ, ಆ.27: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ವಿಚಾರಣೆ ನಡೆಸಿದ ಗ್ರಾಮಪಂಚಾಯತ್ ಬಾಲಕಿಯ ತಲೆಬೋಳಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸುವ ಶಿಕ್ಷೆ ವಿಧಿಸಿರುವ ಆಘಾತಕಾರಿ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.
ಆಗಸ್ಟ್ 14ರಂದು ಸಂಜೆ ಮನೆಯಿಂದ ಹೊರ ಬಂದಿದ್ದ ಬಾಲಕಿಯನ್ನು ವಾಹನವೊಂದರಲ್ಲಿ ಅಪಹರಿಸಿದ್ದ ತಂಡವೊಂದು ಸ್ಥಳೀಯ ಪಂಚಾಯತ್ ಕಟ್ಟಡದ ಟೆರೇಸ್ನಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿತ್ತು. ಪ್ರಜ್ಞೆ ತಪ್ಪಿ ಬಿದ್ದಿದ್ದ ಬಾಲಕಿಯನ್ನು ಮರುದಿನ ಕಂಡ ವ್ಯಕ್ತಿಯೊಬ್ಬ ಬಾಲಕಿಯ ಮನೆಯವರಿಗೆ ಮಾಹಿತಿ ನೀಡಿದ್ದ. ಆಕೆಯನ್ನು ಮನೆಗೆ ಕರೆತಂದ ಬಳಿಕ ಗ್ರಾಮ ಪಂಚಾಯತ್ಗೆ ದೂರು ನೀಡಲಾಗಿತ್ತು.
ಆದರೆ ಆರೋಪಿಗಳ ಬಂಧುಗಳ ಪ್ರಭಾವಕ್ಕೆ ಒಳಗಾದ ಪಂಚಾಯತ್ ಸದಸ್ಯರು ಸಂತ್ರಸ್ತ ಬಾಲಕಿಗೆ ನೆರವಾಗುವ ಬದಲು ಆಕೆಗೇ ಶಿಕ್ಷೆ ವಿಧಿಸಿದ್ದಾರೆ. ಆಕೆಯ ತಲೆಬೋಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿಸುವಂತೆ ಆದೇಶಿಸಿದ್ದಾರೆ. ಘಟನೆ ನಡೆದ 11 ದಿನದ ಬಳಿಕ ಸಂತ್ರಸ್ತ ಬಾಲಕಿ ಮತ್ತು ಆಕೆಯ ತಾಯಿ ಉನ್ನತ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ದೂರು ಸಲ್ಲಿಸಿದ ಬಳಿಕವಷ್ಟೇ ಎಫ್ಐಆರ್ ದಾಖಲಿಸಲಾಗಿದೆ.
ಸಭೆ ನಡೆಸಿ ಶಿಕ್ಷೆ ಘೋಷಿಸಿದ ಐವರು ಪಂಚಾಯತ್ ಸದಸ್ಯರನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು ಇವರನ್ನು ಬಂಧಿಸಲಾಗಿದೆ. ಜೊತೆಗೆ, ಅತ್ಯಾಚಾರ ನಡೆಸಿದ ಆರೋಪಿಗಳಲ್ಲಿ ದೇವಲಾಲ್ ಯಾದವ್ ಎಂಬಾತನನ್ನು ಸಂತ್ರಸ್ತ ಬಾಲಕಿ ಗುರುತಿಸಿದ್ದು ಆತನನ್ನೂ ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ನಿರಂಜನ ಕುಮಾರಿ ಹೇಳಿದ್ದಾರೆ.
ಘಟನೆಯ ಬಗ್ಗೆ ವರದಿ ನೀಡುವಂತೆ ಹಾಗೂ ಸೆಪ್ಟೆಂಬರ್ 2ರಂದು ಪಂಚಾಯತ್ ಸದಸ್ಯರನ್ನು ತನ್ನೆದುರು ಹಾಜರು ಪಡಿಸುವಂತೆ ಬಿಹಾರ ಮಹಿಳಾ ಆಯೋಗದ ಅಧ್ಯಕ್ಷೆ ದಿಲ್ಮಣಿ ಮಿಶ್ರಾ ಸೂಚಿಸಿದ್ದಾರೆ.