ಲೆಬನಾನ್ ಮೇಲಿನ ಇಸ್ರೇಲ್ ಡ್ರೋನ್ ದಾಳಿ ‘ಯುದ್ಧ ಘೋಷಣೆಗೆ ಸಮ’: ವಿಶ್ವಸಂಸ್ಥೆಗೆ ಲೆಬನಾನ್ ಅಧ್ಯಕ್ಷ ದೂರು

ಬೈರೂತ್ (ಲೆಬನಾನ್), ಆ. 27: ಸಿರಿಯದೊಂದಿಗಿನ ಗಡಿಯ ಸಮೀಪ ಪೂರ್ವ ಲೆಬನಾನ್‌ನಲ್ಲಿರುವ ಫೆಲೆಸ್ತೀನ್ ನೆಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ಮೂರು ವಾಯು ದಾಳಿಗಳು ‘‘ಯುದ್ಧ ಘೋಷಣೆಗೆ ಸಮವಾಗಿದೆ’’ ಎಂದು ಲೆಬನಾನ್ ಅಧ್ಯಕ್ಷ ಮೈಕಲ್ ಔನ್ ಸೋಮವಾರ ಹೇಳಿದ್ದಾರೆ.
ಬೆಕಾ ಕಣಿವೆಯಲ್ಲಿರುವ ಕುಸಾಯ ಸಮೀಪದ ‘ಪಾಪ್ಯುಲರ್ ಫ್ರಂಟ್ ಫಾರ್ ದ ಲಿಬರೇಶನ್ ಆಫ್ ಫೆಲೆಸ್ತೀನ್-ಜನರಲ್ ಕಮಾಂಡ್’ ಎಂಬ ಹೆಸರಿನ ಸಿರಿಯ ಬೆಂಬಲಿತ ಗುಂಪಿಗೆ ಸೇರಿದ ನೆಲೆಯೊಂದರ ಮೇಲೆ ಸೋಮವಾರ ಮುಂಜಾನೆ ಕೆಲವೇ ನಿಮಿಷಗಳ ಅಂತರದಲ್ಲಿ ಮೂರು ಡ್ರೋನ್‌ಗಳು ದಾಳಿ ನಡೆಸಿವೆ. ಈ ಗುಂಪು ಹಿಝ್ಬುಲ್ಲಾದ ಮಿತ್ರಪಡೆಯಾಗಿದೆ.
ದಕ್ಷಿಣ ಬೈರೂತ್‌ನಲ್ಲಿರುವ ಹಿಝ್ಬುಲ್ಲಾ ಭದ್ರಕೋಟೆಯೊಂದರಲ್ಲಿ ಇಸ್ರೇಲ್ ಡ್ರೋನೊಂದು ಪತನಗೊಂಡ ಒಂದು ದಿನದ ಬಳಿಕ ಈ ದಾಳಿಗಳು ನಡೆದಿವೆ.
ಈ ದಾಳಿಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಉಲ್ಲಂಘಿಸುತ್ತದೆ ಎಂದು ಲೆಬನಾನ್‌ಗಾಗಿ ವಿಶ್ವಸಂಸ್ಥೆಯ ವಿಶೇಷ ಸಮನ್ವಯಕಾರ ಜಾನ್ ಕುಬಿಸ್‌ಗೆ ಮೈಕಲ್ ಔನ್ ಹೇಳಿದರು.
ಇಸ್ರೇಲ್ ಮತ್ತು ಹಿಝ್ಬುಲ್ಲಾ ನಡುವೆ 2006ರಲ್ಲಿ ನಡೆದ ಯುದ್ಧವು ವಿಶ್ವಸಂಸ್ಥೆಯ ಈ ನಿರ್ಣಯದೊಂದಿಗೆ ಮುಕ್ತಾಯಗೊಂಡಿತ್ತು.
‘‘ಅಲ್ಲಿ ನಡೆದಿರುವುದು ಯುದ್ಧ ಘೋಷಣೆಗೆ ಸಮವಾಗಿದೆ ಹಾಗೂ ನಮ್ಮ ಸಾರ್ವಭೌಮತ್ವ, ಸ್ವಾತಂತ್ರ ಮತ್ತು ನಮ್ಮ ನೆಲದ ಸುರಕ್ಷತೆಯನ್ನು ರಕ್ಷಿಸುವ ಹಕ್ಕನ್ನು ನಮಗೆ ನೀಡುತ್ತದೆ’’ ಎಂದು ಔನ್ ನುಡಿದರು.
‘‘ನಾವು ಶಾಂತಿಯನ್ನು ಬಯಸುವ ಜನರು, ಯುದ್ಧವನ್ನಲ್ಲ. ಆದರೆ, ಯಾವುದೇ ವಿಧಾನದ ಮೂಲಕ ಯಾರಾದರೂ ನಮ್ಮನ್ನು ಬೆದರಿಸುವುದನ್ನು ನಾವು ಸ್ವೀಕರಿಸುವುದಿಲ್ಲ’’ ಎಂದರು.