ದರೋಡೆ ಪ್ರಕರಣ: ಇಬ್ಬರಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ

ಮಂಗಳೂರು, ಆ. 27: ಮನೆಯೊಳಗೆ ಅಕ್ರಮ ಪ್ರವೇಶಗೈದು ಹಲ್ಲೆ ನಡೆಸಿ ಚಿನ್ನದ ಸರ ದರೋಡೆ ನಡೆಸಿದ ಇಬ್ಬರು ಆರೋಪಿಗಳ ಅಪರಾಧವು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅವರಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಶಿವಮೊಗ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಬೇಲೂರು ಗ್ರಾಮದ ಕಣಕಿ ಬೆಲೂರು ಮನೆ ಪ್ರವೀಣ್ ಕೆ.ಜಿ.(33) ಹಾಗೂ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು ಬೇಗೂರು ಗ್ರಾಮದ ಜೋಡುಮಳ ಮನೆ ಸಂಜು ಯಾನೆ ಸಂಜಯ್ (33) ಶಿಕ್ಷೆಗೊಳಗಾದವರು.
ಅಕ್ರಮ ಪ್ರವೇಶ ಮಾಡಿರುವುದಕ್ಕೆ ಒಂದು ವರ್ಷ ಸಾದಾ ಸಜೆ, ಸುಲಿಗೆ ಮಾಡಿರುವುದಕ್ಕೆ ಏಳು ವರ್ಷ ಕಠಿಣ ಶಿಕ್ಷೆ, ತಲಾ 10 ಸಾವಿರ ರೂ. ದಂಡ. 10 ಸಾವಿರ ರೂ. ದಂಡ ಪಾವತಿಸದಿದ್ದರೆ ಮತ್ತೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ವಿವರ: 2018ರ ಆ. 8ರಂದು ಬಂಟ್ವಾಳ ತಾಲೂಕಿನ ಮೊಡಂಕಾಪು ಖಾಸಗಿ ಕಾಲೇಜು ಬಳಿಯ ನಿವಾಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಜನಾರ್ದನ ಹೊಳ್ಳ (67) ಅವರ ಮನೆಗೆ ಪ್ರವೀಣ್ ಮತ್ತು ಸಂಜಯ್ ರಾತ್ರಿ ವೇಳೆ ಅಕ್ರಮವಾಗಿ ಪ್ರವೇಶಿಸಿದ್ದರು. ಬಾಗಿಲು ತೆರೆದು ಹೊರ ಬಂದ ಜನಾರ್ದನ ಹೊಳ್ಳ ಅವರ ಕುತ್ತಿಗೆಯಲ್ಲಿದ್ದ 76 ಸಾವಿರ ರೂ. ಮೌಲ್ಯದ ಚಿನ್ನದ ಸರ ಕಿತ್ತುಕೊಂಡು ಅವರಿಗೆ ಕತ್ತಿಯಿಂದ ತಲೆ ಹಾಗೂ ಕುತ್ತಿಗೆ ಭಾಗಗಳಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆ.27ರಂದು ಪ್ರವೀಣ್‌ನನ್ನು ಪೊಲೀಸರು ಬಂಧಿಸಿದ್ದರು. ಲೂಟಿ ಮಾಡಿದ ಚಿನ್ನದ ಸರವನ್ನು ತೀರ್ಥಹಳ್ಳಿಯ ಫೈನಾನ್ಸ್‌ನಲ್ಲಿ ಅಡವಿಟ್ಟಿದ್ದ. ಪೊಲೀಸರು ಚಿನ್ನದ ಸರ ಹಾಗೂ ಹಲ್ಲೆ ನಡೆಸಲು ಉಪಯೋಗಿಸಿದ ಕತ್ತಿಯನ್ನು ವಶಪಡಿಸಿಕೊಂಡಿದ್ದರು.
ಎರಡನೇ ಆರೋಪಿ ಸಂಜಯ್ ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿ ಹಾಸನ ಜೈಲ್‌ನಲ್ಲಿದ್ದ. ಬಂಟ್ವಾಳ ಪೊಲೀಸರು ಬಾಡಿ ವಾರಂಟ್ ಮೂಲಕ ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಕಡ್ಲೂರು ಸತ್ಯನಾರಾಯಣಾಚಾರ್ ವಾದ ಪ್ರತಿವಾದ ಆಲಿಸಿ ತೀರ್ಪು ಪ್ರಕಟಿಸಿದ್ದಾರೆ. ಸರಕಾರದ ಪರವಾಗಿ ಆರಂಭದಲ್ಲಿ ಸರಕಾರಿ ಅಭಿಯೋಜಕ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು. ಆನಂತರ ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು. ವೈದ್ಯರು, ನೆರೆ ಕರೆಯವರು ಸೇರಿದಂತೆ ಒಟ್ಟು 13ಮಂದಿ ಸಾಕ್ಷಿ ಹೇಳಿದ್ದಾರೆ.







