ತಜ್ಞರ ಕೊರತೆಯಿಂದ ಶಿಲ್ಪಶಾಸ್ತ್ರ ದುರ್ಬಲ: ಪ್ರೊ.ಮುರಳೀಧರ ಉಪಾಧ್ಯ

ಉಡುಪಿ, ಆ.27: ತಜ್ಞರ ಕೊರತೆಯಿಂದ ನಮ್ಮಲ್ಲಿ ಶಿಲ್ಪ ಶಾಸ್ತ್ರ ತೀರಾ ದುರ್ಬಲವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವಂತೆ ಪ್ರೇರಣೆ ನೀಡುವ ಕೆಲಸ ಆಗಬೇಕು ಎಂದು ಹಿರಿಯ ವಿಮರ್ಶಕ ಹಾಗೂ ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ಆಡಳಿತ ವಿಶ್ವಸ್ಥ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಹೇಳಿದ್ದಾರೆ.
ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಂತರಿಕ ಗುಣಮಟ್ಟ ಕೋಶ, ಇತಿಹಾಸ ವಿಭಾಗ ಹಾಗೂ ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಸಹಯೋಗದಲ್ಲಿ ಮಂಗಳವಾರ ಕಾಲೇಜಿನ ಯು.ಜಿ.ಎ.ವಿ. ಹಾಲ್‌ನಲ್ಲಿ ಆಯೋಜಿಸಲಾದ ‘ತುಳುವ ಇತಿಹಾಸ- ಸಂಸ್ಕೃತಿ ಚಿಂತನೆ’ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇವಸ್ಥಾನಗಳ ಜಿಲ್ಲೆಯಾಗಿರುವ ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚು ಪ್ರಾಚೀನ ವಿಗ್ರಹಗಳ ಕಳವು ನಡೆಯುತ್ತಿದೆ. ಹೀಗೆ ನಾವು ಅತ್ಯಂತ ಪ್ರಾಚೀನ ವಿಗ್ರಹಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಆದುದರಿಂದ ಸರಕಾರ ಹಾಗೂ ಜನರಲ್ಲಿ ಎಚ್ಚರಿಕೆ ಮೂಡಿಸುವ ಕೆಲಸ ಮಾಡಬೇಕಾಗಿದೆ. ಪ್ರಾಚೀನ ಮೂರ್ತಿ ಗಳ ರಕ್ಷಣೆ ಬಗ್ಗೆ ನೂತನ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಬೇಕು ಎಂದರು.
‘ತುಳುನಾಡಿನ ವಿಶಿಷ್ಟ ಶಾಸನಗಳು’ ಎಂಬ ವಿಷಯದ ಕುರಿತು ಇತಿಹಾಸ ತಜ್ಞ ಹಾಗೂ ಉಡುಪಿ ಪಿಪಿಸಿ ನಿವೃತ್ತ ಪ್ರಾಂಶುಪಾಲ ಡಾ.ಜಗದೀಶ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಈವರೆಗೆ ಆಳುಪ, ಹೊಯ್ಸಳ, ವಿಜಯ ನಗರ ಹಾಗೂ ಕೆಳದಿ ನಾಯಕರ ಶಾಸನಗಳು ಪತ್ತೆಯಾಗಿವೆ. ಈ ಶಾಸನಗಳನ್ನು ಅಧ್ಯಯನ ಮಾಡಿದಾಗ ಇತಿಹಾಸ ಹಾಗೂ ಸಂಸ್ಕೃತಿಯನ್ನು ಪುನರ್‌ರಚಿಸಲು ಸಾಧ್ಯವಾಗುತ್ತದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಪ್ರಾಚೀನ ಶಾಸನವು ಏಳನೆ ಶತಮಾನದಲ್ಲಿ ವಡ್ಡರ್ಸೆಯಲ್ಲಿ ಪತ್ತೆಯಾಗಿದೆ. ಈ ಜಿಲ್ಲೆಯಲ್ಲಿ ಅತ್ಯಂತ ದೀಘಾವಧಿ ಆಡಳಿತ ನಡೆಸಿದ ಆಳುಪ ರಾಜ ಶಾಸನ ಇದಾಗಿದೆ. ಇದು ಸ್ಥಳೀಯ ಸಾಮಾಜಿಕ ವ್ಯವಸ್ಥೆ ಯನ್ನು ಅಧ್ಯಯನ ಮಾಡಲು ಅತ್ಯುತ್ತಮವಾದ ಆಕರವಾಗಿದೆ. ಎಂಟನೆ ಶತ ಮಾನದಲ್ಲಿ ಕನ್ನಡದ ಪ್ರಥಮ ತಾಮ್ರ ಶಾಸನವು ಬೆಳ್ಮಣ್‌ನಲ್ಲಿ ಪತ್ತೆಯಾಗಿ ರುವುದು ವಿಶೇಷ. ಇದು ಸ್ಥಳೀಯ ಸ್ಥಳ ಹಾಗೂ ಊರಿನ ಬಗ್ಗೆ ಅಧ್ಯಯನ ನಡೆಸಲು ಸಹಕರಿಯಾಗಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್. ಮಾತನಾಡಿ, ನಮಗೆ ಸ್ಥಳೀಯ ಇತಿಹಾಸ ಜ್ಞಾನದ ಕೊರತೆ ಇದೆ. ಪ್ರಾದೇಶಿಕ ಇತಿಹಾಸದ ಬಗ್ಗೆ ಸಮಗ್ರ ಅಧ್ಯಯನ ಮಾಡಿದರೆ ರಾಷ್ಟ್ರದ ಇತಿಹಾಸ ಅಧ್ಯಯನಕ್ಕೆ ಪೂರಕವಾಗಲಿದೆ. ಆದುದರಿಂದ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದರು.
‘ತುಳುನಾಡಿನ ಸ್ಮಾರಕ ಪರಂಪರೆ’ ಕುರಿತು ಮೂಡಬಿದಿರೆ ಧವಳಾ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಪುಂಡಿಕಾ ಗಣಪಯ್ಯ ಭಟ್ ಮಾತನಾಡಿದರು. ಇತಿಹಾಸ ಉಪನ್ಯಾಸಕ ಡಾ.ರಾಮದಾಸ್ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಗುರುರಾಜ್ ಪ್ರಭು ಸ್ವಾಗತಿಸಿದರು. ವಿದ್ಯಾರ್ಥಿನಿ ಸುಕನ್ಯಾ ವಂದಿಸಿದರು. ಉಪನ್ಯಾಸಕ ಕಿಶೋರ್‌ಚಂದ್ರ ಕಾರ್ಯ ಕ್ರಮ ನಿರೂಪಿಸಿದರು.







