ಅಕ್ರಮ ಜೂಜಾಟ ಅಡ್ಡೆಗೆ ದಾಳಿ: 7 ಮಂದಿ ಸೆರೆ
ಮಂಗಳೂರು ಸಿಸಿಬಿ-ಉಳ್ಳಾಲ ಪೊಲೀಸರ ಕಾರ್ಯಾಚರಣೆ
ಮಂಗಳೂರು, ಆ. 27: ಕೋಟೆಕಾರು ದೇರಳಕಟ್ಟೆಯ ವಸತಿಗೃಹವೊಂದರಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಹಾಗೂ ಉಳ್ಳಾಲ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ.
ಕಂಕನಾಡಿ ನಿವಾಸಿ ಕಿಶೋರ್ ಕೊಟ್ಟಾರಿ, ಅಂಬ್ಲಮೊಗರು ನಿವಾಸಿ ನಿತಿನ್, ಕೊಂಡಾಣ ನಿವಾಸಿ ಅಬ್ದುಲ್ ರಝಾಕ್, ಬೊಂಡಂತಿಲ ನಿವಾಸಿ ಶಿಲಾಸ್ ಶೆಟ್ಟಿ, ಬಜಾಲ್ ನಿವಾಸಿ ಅರ್ವಿನ್ ಡಿಸೋಜ, ಜೋಕಟ್ಟೆ ನಿವಾಸಿ ಅಮೀರುದ್ದೀನ್, ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮುಹಮ್ಮದ್ ಇಕ್ಬಾಲ್ ಬಂಧಿತ ಆರೋಪಿಗಳು.
ಮಂಗಳವಾರ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಹೊಟೇಲ್‌ವೊಂದರ ವಸತಿಗೃಹದ ಕೊಠಡಿವೊಂದರಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಹಾಗೂ ಉಳ್ಳಾಲ ಪೊಲೀಸರು ಜೂಜಾಟ ಅಡ್ಡೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 2.34 ಲಕ್ಷ ರೂ. ನಗದು, ಆರು ಮೊಬೈಲ್ ಫೋನ್‌ಗಳು ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶು ಗಿರಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕೆ, ಉಳ್ಳಾಲ ಪೊಲೀಸ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ, ಸಿಸಿಬಿ ಪಿಎಸ್ಸೈ ಕಬ್ಬಾಳ್‌ರಾಜ್ ಎಚ್.ಡಿ. ಹಾಗೂ ಸಿಸಿಬಿ ಮತ್ತು ಉಳ್ಳಾಲ ಠಾಣಾ ಸಿಬ್ಬಂದಿ ಭಾಗವಹಿಸಿದ್ದರು.







