ಕಾಂಗ್ರೆಸ್ ನಾಯಕನ 150 ಕೋ.ರೂ. ಬೆಲೆಯ ಬೇನಾಮಿ ಹೋಟೆಲ್ ಜಪ್ತಿ ಮಾಡಿದ ಐಟಿ

ಹೊಸದಿಲ್ಲಿ,ಆ.27: ಹರ್ಯಾಣ ಕಾಂಗ್ರೆಸ್ ನಾಯಕ ಕಲದೀಪ್ ಬಿಷ್ಣೋಯಿ ಮತ್ತು ಅವರ ಸಹೋದರನಿಗೆ ಸೇರಿದ ಗುರುಗ್ರಾಮದಲ್ಲಿರುವ 150 ಕೋ.ರೂ. ಮೌಲ್ಯದ ಪಂಚತಾರಾ ಹೋಟೆಲನ್ನು ಬೇನಾಮಿ ಎಂದು ಪರಿಗಣಿಸಿರುವ ಆದಾಯ ತೆರಿಗೆ ಇಲಾಖೆ ಅದನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುಗ್ರಾಮದ ಡಿಎಲ್‌ಎಫ್ ಫೇಸ್-1ನಲ್ಲಿರುವ ಬ್ರಿಸ್ಟಾಲ್ ಹೆಸರಿನ ಹೋಟೆಲನ್ನು ಬೇನಾಮಿ ಆಸ್ತಿ ವ್ಯವಹಾರಗಳ ನಿಷೇಧ ಕಾಯ್ದೆ, 1988ರ 24(3)ನೇ ವಿಧಿಯಡಿ ಜಪ್ತಿ ಮಾಡಲು ದಿಲ್ಲಿಯಲ್ಲಿರುವ ಐಟಿ ಇಲಾಖೆಯ ಬೇನಾಮಿ ವಿರೋಧಿ ವಿಭಾಗ ಆದೇಶ ಜಾರಿ ಮಾಡಿತ್ತು. ಈ ಹೋಟೆಲ್‌ನ ಮಾಲಕತ್ವವನ್ನು ಬ್ರೈಟ್ ಸ್ಟಾರ್ ಹೋಟೆಲ್ ಪ್ರೈ.ಲಿ. ಹೆಸರಿನ ಕಂಪೆನಿ ಹೊಂದಿರುವುದಾಗಿ ತಿಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಬಿಷ್ಣೋಯಿಯ ಹರ್ಯಾಣ, ದಿಲ್ಲಿ ಮತ್ತು ಹಿಮಾಚಲ ಪ್ರದೇಶದಲ್ಲಿರುವ 13 ಆಸ್ತಿಗಳ ಮೇಲೆ ಐಟಿ ಅಧಿಕಾರಿಗಳು ಜುಲೈ 23ರಂದು ನಡೆಸಿದ ದಾಳಿಯ ಭಾಗವಾಗಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಂಪೆನಿಯ ಶೇ.34 ಶೇರುಗಳನ್ನು ಯುಎಇಯಿಂದ ಕಾರ್ಯಾಚರಿಸುತ್ತಿದ್ದ ಬ್ರಿಟಿಶ್ ವರ್ಜಿನ್ ಐಲ್ಯಾಂಡ್ಸ್ ಹೆಸರಿನ ಕಂಪೆನಿ ಹೊಂದಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





