ಜಮ್ಮು ಕಾಶ್ಮೀರ ವಿಭಜನೆ: ಸರಕಾರದ ಉನ್ನತ ಅಧಿಕಾರಿಗಳಿಂದ ಚರ್ಚೆ

ಹೊಸದಿಲ್ಲಿ,ಆ.27: ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದು ಮತ್ತು ಅವುಗಳ ಮಧ್ಯೆ ಸಂಪತ್ತು ಮತ್ತು ಮಾನವಸಂಪನ್ಮೂಲದ ಹಂಚಿಕೆ ಕುರಿತು ಕೇಂದ್ರ ಸರಕಾರದ ಉನ್ನತ ಅಧಿಕಾರಿಗಳು ಮಂಗಳವಾರ ಚರ್ಚೆ ನಡೆಸಿದರು.
ಕೇಂದ್ರ ಗೃಹ ಕಾರ್ಯದರ್ಶಿ ಎ.ಕೆ ಭಲ್ಲ ಅಧ್ಯಕ್ಷತೆವಹಿಸಿದ್ದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ, 2019ಗೆ ಅನುಗುಣವಾಗಿ ಮುಂದೆ ಸಾಗಬೇಕಾದ ಅನಿವಾರ್ಯತೆಗೆ ಒತ್ತು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಕಣಿವೆರಾಜ್ಯ ರಾಷ್ಟ್ರಪತಿ ಆಳ್ವಿಕೆಯಡಿಯಲ್ಲಿದ್ದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಅಕ್ಟೋಬರ್ 31ರಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬರಲು ಅನುಕೂಲ ಮಾಡಿಕೊಡುವ ಕಾಯ್ದೆಯನ್ನು ಅನುಷ್ಟಾನಗೊಳಿಸುವ ಹೊಣೆ ಕೇಂದ್ರ ಸರಕಾರದ ಮೇಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ವಿತ್ತ, ಕೃಷಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ ಸೇರಿದಂತೆ ಕೇಂದ್ರದ ಪ್ರಮುಖ ಸಚಿವಾಲಯಗಳು ಮತ್ತು ಇಲಾಕೆಗಳ 15ಕ್ಕೂ ಹೆಚ್ಚು ಕಾರ್ಯದರ್ಶಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಘೋಷಿಸಿರುವ 85 ಅಭಿವೃದ್ಧಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಲು ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಸಹಕರಿಸಲಿದೆ. ಜಮ್ಮು ಮತ್ತು ಕಾಶ್ಮೀರದ ಆಡಳಿತ ಈಗಾಗಲೇ ರಾಜ್ಯದ ವಿಭಜನೆಯನ್ನು ನಿಬಾಯಿಸಲು ಮೂರು ಸಮಿತಿಗಳನ್ನು ರಚಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







