ಯೆಮನ್: ಪ್ರತ್ಯೇಕತಾವಾದಿಗಳ ನಡುವೆ ಶಾಂತಿಗೆ ಸೌದಿ, ಯುಎಇ ಕರೆ

ರಿಯಾದ್, ಆ. 27: ಯೆಮನ್ ಸರಕಾರ ಮತ್ತು ದಕ್ಷಿಣದ ಪ್ರತ್ಯೇಕತಾವಾದಿಗಳ ನಡುವೆ ಯುದ್ಧವಿರಾಮ ಮತ್ತು ಶಾಂತಿ ಮಾತುಕತೆಗಳು ನಡೆಯಬೇಕೆಂದು ಸೌದಿ ಅರೇಬಿಯ ಮತ್ತು ಯುಎಇ ಸೋಮವಾರ ಕರೆ ನೀಡಿವೆ.
ಪ್ರತ್ಯೇಕತಾವಾದಿ ಸದರ್ನ್ ಟ್ರಾನ್ಸಿಶನಲ್ ಕೌನ್ಸಿಲ್ (ಎಸ್‌ಟಿಸಿ)ಗೆ ನಿಷ್ಠವಾಗಿರುವ ಸೆಕ್ಯುರಿಟಿ ಬೆಲ್ಟ್ ಪಡೆಗಳು ದಕ್ಷಿಣದ ನಗರ ಏಡನನ್ನು ಆಗಸ್ಟ್ 10ರಂದು ವಶಪಡಿಸಿಕೊಂಡಿವೆ. ಅದಕ್ಕೂ ಮೊದಲು ಸರಕಾರಿ ಪಡೆಗಳು ಮತ್ತು ಸೆಕ್ಯುರಿಟಿ ಬೆಲ್ಟ್ ಪಡೆಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ.
ಮೈತ್ರಿ ಸಮಿತಿಗೆ ಸಹಕಾರ ನೀಡಿ ಹಾಗೂ ಜಿದ್ದಾದಲ್ಲಿ ನಡೆಯಲಿರುವ ಮಾತುಕತೆಯಲ್ಲಿ ಭಾಗವಹಿಸಿ ಎಂದು ಸೌದಿ ಮತ್ತು ಯುಎಇ ವಿದೇಶ ಸಚಿವಾಲಯಗಳು ಸೋಮವಾರ ನೀಡಿರುವ ಜಂಟಿ ಹೇಳಿಕೆಯೊಂದರಲ್ಲಿ ಉಭಯ ಬಣಗಳಿಗೆ ಕರೆ ನೀಡಿವೆ.
ದಕ್ಷಿಣದ ಕೆಲವು ಪ್ರಾಂತಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕಾರಣಗಳು ಮತ್ತು ಪರಿಣಾಮಗಳ ಬಗ್ಗೆ ಚರ್ಚಿಸಲು ಸೌದಿ ಅರೇಬಿಯವು ಜಿದ್ದಾದಲ್ಲಿ ಏರ್ಪಡಿಸಿರುವ ಸಭೆಯಲ್ಲಿ ಬೇಗನೇ ತೊಡಗಿಸಿಕೊಳ್ಳುವಂತೆ ಈ ದೇಶಗಳು ಒತ್ತಾಯಿಸಿವೆ.





