ಎನ್ಆರ್ಸಿಯಲ್ಲಿ ಹೆಸರು ಇಲ್ಲದವರಿಗೆ ಅಸ್ಸಾಂ ಸರಕಾರದಿಂದ ಕಾನೂನು ನೆರವು

ಗುವಾಹತಿ, ಆ. 27: ಆಗಸ್ಟ್ 31ರಂದು ಪ್ರಕಟವಾಗಲಿರುವ ಅಂತಿಮ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ)ಯಲ್ಲಿ ಹೆಸರು ಇಲ್ಲದೇ ಇರುವ ಅಗತ್ಯದ ಜನರಿಗೆ ಕಾನೂನು ನೆರವು ನೀಡಲಾಗುವುದು ಎಂದು ಅಸ್ಸಾಂ ಸರಕಾರ ಮಂಗಳವಾರ ಹೇಳಿದೆ.
ವಿದೇಶಿಗರ ನ್ಯಾಯಾಧಿಕರಣ ವಿದೇಶಿಯರು ಎಂದು ಘೋಷಿಸುವ ವರೆಗೆ ಯಾವುದೇ ಸನ್ನಿವೇಶದಲ್ಲಿ ಕೂಡ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಯಲ್ಲಿ ಹೆಸರು ಇಲ್ಲದವರನ್ನು ವಶಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಅಸ್ಸಾಂನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಕುಮಾರ್ ಸಂಜಯ್ ಕೃಷ್ಣಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಯಲ್ಲಿ ಹೆಸರು ಬಿಟ್ಟು ಹೋದವರಲ್ಲಿ ಅಗತ್ಯ ಇರುವವರಿಗೆ ಕಾನೂನು ನೆರವು ನೀಡಲು ರಾಜ್ಯ ಸರಕಾರ ಅಗತ್ಯದ ವ್ಯವಸ್ಥೆ ಕಲ್ಪಿಸಲಿದೆ ಎಂದು ಅವರು ತಿಳಿಸಿದ್ದಾರೆ.
ವಿದೇಶಿಗರ ಕಾಯ್ದೆ 1946 ಹಾಗೂ ವಿದೇಶಿಗರ (ನ್ಯಾಯಾಧಿಕರಣ) ಆದೇಶ 1946 ನಿಯಮದ ಅಡಿಯಲ್ಲಿ ಓರ್ವ ವ್ಯಕ್ತಿಯನ್ನು ವಿದೇಶಿಗ ಎಂದು ಘೋಷಿಸಲು ವಿದೇಶಿಗರ ನ್ಯಾಯಾಧಿಕರಣಕ್ಕೆ ಮಾತ್ರ ಅಧಿಕಾರ ಇರುತ್ತದೆ ಎಂದು ಹೇಳಿಕೆ ತಿಳಿಸಿದೆ.