ಬಿಬಿಎಂಪಿಯ ಎಲ್ಲ ಸಭೆಗೂ ಅಧಿಕಾರಿಗಳ ಹಾಜರಾತಿ ಕಡ್ಡಾಯ: ಆಯುಕ್ತ ಮಂಜುನಾಥ್ ಪ್ರಸಾದ್

ಬೆಂಗಳೂರು, ಆ.27: ಬಿಬಿಎಂಪಿ ಅಧಿಕಾರಿಗಳು ಪ್ರತಿಯೊಂದು ಸಭೆಗೂ ಕಡ್ಡಾಯವಾಗಿ ಹಾಜರಾಗಬೇಕು. ಸಭೆಯಲ್ಲಿ ನಡೆಯುವ ಪ್ರತಿಯೊಂದು ವಿಷಯಗಳ ಬಗ್ಗೆ ಟಿಪ್ಪಣಿ ಮಾಡಿಕೊಂಡು ಯೋಜನೆಗಳ ಅನುಷ್ಠಾನಕ್ಕೆ ಕ್ರಮವಹಿಸಬೇಕು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಎರಡು ಗಂಟೆಗಳ ಕಾಲ ತಡವಾಗಿ ಆರಂಭವಾದ ಮಾಸಿಕ ಸಭೆಯಲ್ಲಿ ಕೆಲ ಅಧಿಕಾರಿಗಳು ಗೈರು ಹಾಜರಾಗಿರುವುದನ್ನು ಕಂಡ ಬಿಬಿಎಂಪಿ ಸದಸ್ಯ ಗುಣಶೇಖರ್ ಅಸಮಾಧಾನವನ್ನು ಹೊರಹಾಕಿದರು. ಅಲ್ಲದೆ, ಮಾಸಿಕ ಸಭೆ ನಡೆಯಲಿದೆ ಎಂದು ಎಲ್ಲ ಅಧಿಕಾರಿಗಳಿಗೂ ಮುಂಚಿತವಾಗಿಯೇ ನೋಟಿಸ್ ಮೂಲಕ ತಿಳಿಸಲಾಗುತ್ತದೆ. ಆದರೆ ಅಧಿಕಾರಿಗಳು ಮಾತ್ರ ಸಭೆಗೆ ಹಾಜರಾಗುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದಾಗ, ಆಯುಕ್ತರು ಪಾಲಿಕೆಯ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವುದಾಗಿ ತಿಳಿಸಿದರು.
ಸಭೆಗೆ ಹಾಜರಾಗದೆ ಇರುವ ಅಧಿಕಾರಿಗಳಿಗೆ ದಂಡ ವಿಧಿಸಬೇಕು. ಮೇಯರ್ ಅವರು ಆಯುಕ್ತರಿಗೆ ತಕ್ಷಣವೇ ಸೂಚನೆ ನೀಡಬೇಕು ಎಂದು ಪಟ್ಟು ಹಿಡಿದ ಗುಣಶೇಖರ್, ಒಂದು ಹಂತದಲ್ಲಿ ತಮಗೆ ಸಮರ್ಪಕ ಉತ್ತರ ಬಾರದಿದ್ದಲ್ಲಿ, ಸಭಾತ್ಯಾಗ ಮಾಡುವ ಎಚ್ಚರಿಕೆ ನೀಡಿದರು. ಆಗ ಮೇಯರ್ ಗಂಗಾಂಬಿಕೆ ಅವರು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಈ ವೇಳೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಅವರು, ತಿಂಗಳಿಗೆ ಒಂದು ಸಭೆ ನಡೆಯುತ್ತದೆ. ಆ ಸಭೆಗೂ ಅಧಿಕಾರಿಗಳು ಬಾರದಿದ್ದರೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗ ಮತ್ತೆ ಎದ್ದುನಿಂತ ಗುಣಶೇಖರ್ ಅವರು, ಹೊಸದಾಗಿ ನೇಮಕಗೊಂಡ ಅಧಿಕಾರಿಗಳು ಇನ್ನೂ ಸಭೆಗೆ ತಮ್ಮ ಪರಿಚಯವನ್ನೇ ಮಾಡಿಕೊಂಡಿಲ್ಲ ಎಂದು ಹೇಳಿದರು. ಈ ಸಭೆಗೆ ಗೌರವವೇ ಇಲ್ಲವೆ? ಸಭೆಗೆ ಗೈರುಹಾಜರಾದ ಅಧಿಕಾರಿಗಳಿಗೆ ದಂಡ ವಿಧಿಸಬೇಕು ಎಂದು ಮತ್ತೊಮ್ಮೆ ಅವರು ಪಟ್ಟು ಹಿಡಿದಿದ್ದರು.







