ಚಾಂಪಿಯನ್ ಜೊಕೊವಿಕ್ ಶುಭಾರಂಭ
ಅಮೆರಿಕ ಓಪನ್

ನ್ಯೂಯಾರ್ಕ್,ಆ.27: ಅಗ್ರ ಶ್ರೇಯಾಂಕದ, ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಸೋಮವಾರ ಆರಂಭವಾದ ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಜಯ ದಾಖಲಿಸಿ ಶುಭಾರಂಭ ಮಾಡಿದ್ದಾರೆ.
ಫ್ರೆಂಚ್ ಓಪನ್ ಚಾಂಪಿಯನ್ ಅಶ್ಲೆಘ್ ಬಾರ್ಟಿ, ಮೂರನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾ ಆತಂಕದ ಕ್ಷಣ ಎದುರಿಸಿದ್ದರೂ ಮುಂದಿನ ಸುತ್ತಿ ಗೇರಿದರು.
ಕಳೆದ 5 ಗ್ರಾನ್‌ಸ್ಲಾಮ್ ಟೂರ್ನಿಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿರುವ ಸರ್ಬಿಯದ ಸ್ಟಾರ್ ಆಟಗಾರ ಜೊಕೊವಿಕ್ ಸ್ಪೇನ್‌ನ 76ನೇ ರ್ಯಾಂಕಿನ ರೊಬರ್ಟೊ ಕಾರ್ಬಾಲ್ಲಿಸ್‌ರನ್ನು 6-4, 6-1, 6-4 ಸೆಟ್‌ಗಳಿಂದ ಮಣಿಸಿದ್ದಾರೆ.
ರೋಜರ್ ಫೆಡರರ್(2004ರಿಂದ 2008) ಬಳಿಕ ಸತತ ಎರಡನೇ ಯುಎಸ್ ಓಪನ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಸ್ಯಾಮ್ ಕ್ವಾರ್ರಿ ಅಥವಾ ಅರ್ಜೆಂಟೀನದ ಜುಯಾನ್ ಇಗ್ನೆಸಿಯೊ ಲಾಂಡೆರೊರನ್ನು ಎದುರಿಸಲಿದ್ದಾರೆ.
ಇದೇ ವೇಳೆ ಜಪಾನ್‌ನ 7ನೇ ಶ್ರೇಯಾಂಕದ ಕೀ ನಿಶಿಕೊರಿ ಅರ್ಜೆಂಟೀನದ 205ನೇ ರ್ಯಾಂಕಿನ ಕ್ವಾಲಿಫೈಯರ್ ಮಾರ್ಕೊ ಟ್ರಂಗ್‌ಲ್ಲಿಟಿ ಅವರನ್ನು 6-1, 4-1 ಅಂತರದಿಂದ ಮಣಿಸಿದರು. 47 ನಿಮಿಷಗಳ ಆಟ ಮುಗಿದ ಬಳಿಕ ಮಾರ್ಕೊ ಗಾಯಗೊಂಡು ನಿವೃತ್ತಿಯಾದರು.
ಆಸ್ಟ್ರೇಲಿಯದ ಎರಡನೇ ಶ್ರೇಯಾಂಕದ ಆಟಗಾರ್ತಿ ಬಾರ್ಟಿ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ 80ನೇ ರ್ಯಾಂಕಿನ ಕಝಕ್‌ಸ್ತಾನದ ಆಟಗಾರ್ತಿ ಝರಿನಾ ದಿಯಾಸ್‌ರನ್ನು 1-6, 6-3, 6-2 ಸೆಟ್‌ಗಳಿಂದ ಮಣಿಸಿದರು. 19 ಅನಗತ್ಯ ತಪ್ಪೆಸಗಿದ ಬಾರ್ಟಿ ಮೊದಲ ಸೆಟ್‌ನ್ನು ಕೇವಲ 18 ನಿಮಿಷಗಳಲ್ಲಿ ಸೋತಿದ್ದಾರೆ. ಎರಡು, ಮೂರನೇ ಸೆಟನ್ನು ಗೆದ್ದುಕೊಂಡು ಪಂದ್ಯ ವಶಪಡಿಸಿಕೊಂಡರು. 2016ರ ಯುಎಸ್ ಓಪನ್ ಚಾಂಪಿಯನ್ ಪ್ಲಿಸ್ಕೋವಾ 138ನೇ ರ್ಯಾಂಕಿನ ಝೆಕ್‌ನ ಟೆರೆಝಾ ಮಾರ್ಟಿನ್‌ಕೋವಾ ವಿರುದ್ಧ 7-6(8/6), 7-6(7-3) ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಏಳು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ವೀನಸ್ ವಿಲಿಯಮ್ಸ್ ಚೀನಾದ ಝೆಂಗ್ ಸೈಸೈ ಅವರನ್ನು 66 ನಿಮಿಷಗಳ ಹೋರಾಟದಲ್ಲಿ 6-1, 6-0 ಸೆಟ್‌ಗಳಿಂದ ಮಣಿಸಿದ್ದಾರೆ.
► ಕೆರ್ಬರ್‌ಗೆ ಶಾಕ್ ನೀಡಿದ ಕ್ರಿಸ್ಟಿನಾ
ಅಮೆರಿಕನ್ ಓಪನ್‌ನ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಕ್ರಿಸ್ಟಿನಾ ಮ್ಲಾಡೆನೊವಿಕ್ ಮಾಜಿ ವಿಶ್ವದ ನಂ.1 ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್‌ರನ್ನು 7-5, 0-6, 6-4 ಸೆಟ್‌ಗಳ ಅಂತರದಿಂದ ಮಣಿಸಿ ಶಾಕ್ ನೀಡಿದರು.
2016ರ ಯುಎಸ್ ಓಪನ್ ಚಾಂಪಿಯನ್ ಕೆರ್ಬರ್ ಅವರ ಎರಡನೇ ಪ್ರಶಸ್ತಿಯ ಕನಸನ್ನು ಕ್ರಿಸ್ಟಿನಾ ಭಗ್ನಗೊಳಿಸಿದರು. ಜರ್ಮನಿ ಆಟಗಾರ್ತಿ ಕ್ರಿಸ್ಟಿನಾ ಎರಡನೇ ಸೆಟ್‌ನಲ್ಲಿ ಬೆನ್ನುನೋವು ಕಾಣಿಸಿಕೊಂಡ ಕಾರಣ ಎರಡು ಬಾರಿ ವೈದ್ಯಕೀಯ ಉಪಚಾರ ಪಡೆದರು. ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಚೇತರಿಸಿಕೊಂಡು 6-4 ಅಂತರದಿಂದ ಜಯ ಸಾಧಿಸಿದರು. 2016ರಲ್ಲಿ ಯುಎಸ್ ಓಪನ್ ಹಾಗೂ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದ ಹಾಗೂ ಕಳೆದ ವರ್ಷ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ್ನು ಜಯಿಸಿದ್ದ ಕೆರ್ಬರ್ ಕಳೆದ ಕೆಲವು ಸಮಯದಿಂದ ಕಳಪೆ ಫಾರ್ಮ್‌ನಲ್ಲಿದ್ದಾರೆ.







