ಮಂಗಳೂರು ವಿವಿ ಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಚಾಲನೆ

ಉಡುಪಿ, ಆ.28: ಮಂಗಳೂರು ವಿಶ್ವವಿದ್ಯಾನಿಲಯ, ಅಜ್ಜರಕಾಡು ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬ್ಯಾಂಕ್ ಆಫ್ ಬರೋಡಾ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದೊಂದಿಗೆ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಎರಡು ದಿನಗಳ ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಪುರುಷ ಹಾಗೂ ಮಹಿಳೆಯರ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಇಂದು ಚಾಲನೆ ನೀಡಲಾಯಿತು.
ಟೂರ್ನಿಯನ್ನು ಉದ್ಘಾಟಿಸಿದ ಬ್ಯಾಂಕ್ ಆಫ್ ಬರೋಡಾದ ಉಡುಪಿ ಪ್ರಾದೇಶಿಕ ಪ್ರಬಂಧಕ ರವೀಂದ್ರ ರೈ ಮಾತನಾಡಿ, ಕ್ರೀಡೆಯಲ್ಲಿ ಭರವಸೆ, ನಂಬಿಕೆ, ಧೈರ್ಯ ಇದ್ದರೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಯುವ ಜನತೆ ತಮ್ಮಲ್ಲಿ ಈ ಮೂರನ್ನು ಮುಖ್ಯವಾಗಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮುಲ್ಕಿ ವಿಜಯ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸುಹಾಸ್ ಹೆಗ್ಡೆ, ಕ್ರೀಡೆಯಲ್ಲಿ ಪ್ರತಿಯೊಬ್ಬರು ಮನಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಛಲ ಹಾಗೂ ಉದ್ದೇಶ, ಗುರಿಯನ್ನು ಹೊಂದಿರಬೇಕು. ಇದರಿಂದ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲಾ ಸಹಕಾರ ಉಪನಿಬಂಧಕ ಪ್ರವೀಣ್ ನಾಯಕ್, ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ., ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಜೇಮ್ಸ್ ಒಲಿವೇರಾ ಉಪಸ್ಥಿತರಿದ್ದರು.
ಪಂದ್ಯಕೂಟದ ಸಂಚಾಲಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಡಾ.ರಾಜೇಂದ್ರ ಕೆ. ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ನಿತ್ಯಾನಂದ ಕಾರ್ಯಕ್ರಮ ನಿರೂಪಿಸಿದರು.







