ಬಡವರಿಗೆ ಮನೆ-ಭೂಮಿ ಒದಗಿಸಲು ಆದ್ಯತೆ ನೀಡಿ: ರಾಜ್ಯ ಸರಕಾರಕ್ಕೆ ಎಚ್.ಎಸ್.ದೊರೆಸ್ವಾಮಿ ಮನವಿ
ಬೆಂಗಳೂರು, ಆ. 28: ಬಡವರಿಗೆ ಮನೆ, ಭೂಮಿ ಒದಗಿಸುವುದು ಸರಕಾರದ ಆದ್ಯತೆಯೆ ಹೊರತು, ಶ್ರೀಮಂತರು ಮತ್ತು ಕಂಪೆನಿಗಳಿಗೆ ಭೂಮಿ ನೀಡುವುದಲ್ಲ. ಹೀಗಾಗಿ ಕಸ್ತೂರಿ ರಂಗನ್ ವರದಿ, ಜಿಂದಾಲ್ ಕಂಪೆನಿಗೆ ಜಮೀನು ಮಂಜೂರು ಪ್ರಕ್ರಿಯೆ ರದ್ದುಗೊಳಿಸಬೇಕೆಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಸಿಎಂ ಬಿಎಸ್‌ವೈಗೆ ಮನವಿ ಮಾಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ದೊರೆಸ್ವಾಮಿ, ಶಾಸಕರ ಅಧ್ಯಕ್ಷತೆಯ ತಾಲೂಕು ಭೂ ಮಂಜೂರಾತಿ ಸಮಿತಿ ರಚಿಸುವುದರ ಮೂಲಕ ಅರ್ಜಿ ಸಲ್ಲಿಸಿರುವ ಎಲ್ಲ ಭೂರಹಿತರಿಗೂ ಭೂಮಿ ಮಂಜೂರಿಗೆ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ಬಳಕೆ ಮಾಡದಿರುವ ‘ಸಿ-ಡಿ’ ಭೂಮಿಯನ್ನು ಕಂದಾಯ ಇಲಾಖೆಗೆ ಬಿಟ್ಟುಕೊಡಬೇಕು. ಅರಣ್ಯ ಭೂಮಿ ಸಾಗುವಳಿ ಮಾಡುತ್ತಿದ್ದು, ಅರ್ಜಿ ಸಲ್ಲಿಸಿರುವವರಿಗೆ ಅರಣ್ಯ ಹಕ್ಕು ಕಾಯ್ದೆಯನ್ವಯ ಭೂ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು.
ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಭೂರಹಿತ ಬಡವರ ಮೇಲೆ ಭೂ ಕಬಳಿಕೆ ನಿಷೇಧ ನ್ಯಾಯಾಲಯದಲ್ಲಿ ದಾಖಲಿಸಿರುವ ಕೇಸುಗಳನ್ನು ಹಿಂಪಡೆಯಬೇಕು. ಅಮೃತಮಹಲ್ ಕಾವಲ್ ಹೆಸರಿನಲ್ಲಿದ್ದು ಈಗಾಗಲೇ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಕಂದಾಯ ಇಲಾಖೆಯು ವಹಿಸಿಕೊಂಡು ಸಾಗುವಳಿ ಮಾಡುತ್ತಿರುವ ರೈತರಿಗೆ ಶರತ್ತುಬದ್ಧವಾಗಿ ಭೂಮಿ ಮಂಜೂರಿಗೆ ಕ್ರಮ ಕೈಗೊಳ್ಳಬೇಕು.
ಫಾರಂ ನಂ.57ರ ಅರ್ಜಿ ಸಲ್ಲಿಸಲು ಪುನಃ ಅವಕಾಶ ಕಲ್ಪಿಸಬೇಕು. ಭೂಮಿ-ವಸತಿ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯ ಕಾರ್ಯದರ್ಶಿಗಳ ಉಸ್ತುವಾರಿಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಆಯಾ ಜಿಲ್ಲೆಗಳ ವರದಿ ತರಿಸಿಕೊಂಡು ಪರಿಶೀಲಿಸಬೇಕು. ಭೂಮಿ-ವಸತಿ ಸಮಸ್ಯೆಗಳ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಮೇಲುಸ್ತುವಾರಿಗಾಗಿ ರಚಿಸಲಾಗಿರುವ ‘ಉನ್ನತ ಮಟ್ಟದ ಸಮಿತಿ’ಯ ಸಭೆ ಕಾಲಕಾಲಕ್ಕೆ ನಡೆಸಬೇಕು.
ಬಾಲಸುಬ್ರಮಣ್ಯಂ ವರದಿ ಮತ್ತು ಎ.ಟಿ.ರಾಮಸ್ವಾಮಿ ವರದಿ ಜಾರಿ ಮಾಡಿ, ಬಲಾಢ್ಯರ, ಭೂ ಕಬಳಿಕೆಗಾರರ ಒತ್ತುವರಿಗಳನ್ನು ಮುಟ್ಟುಗೋಲು ಹಾಕಿಕೊಂಡು ಬಡವರಿಗೆ ಹಂಚುವ ಪ್ರಕ್ರಿಯೆ ಆರಂಭಿಸಬೇಕು. ಲಭ್ಯವಿರುವ ಹೆಚ್ಚುವರಿ ಭೂಮಿಗಳ ವಾಸ್ತವಿಕ ಪಟ್ಟಿ ಮಾಡಿ, ಬಡವರ ವಾಸಕ್ಕೆ ಹಾಗೂ ಶರತ್ತುಬದ್ಧ ಉಳುಮೆಗೆ ಮಂಜೂರು ಮಾಡಬೇಕು.
ಸಮರ್ಪಕ ಪರ್ಯಾಯವನ್ನಾದರೂ ಒದಗಿಸದೆ ಬದುಕಿನ ಆಧಾರವಾದ ಜಮೀನುಗಳಿಂದಾಗಲೀ, ವಾಸವಿರುವ ಮನೆಗಳಿಂದಾಗಲೀ ಬಡವರನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸುವಂತಿಲ್ಲವೆಂಬ ಸುಗ್ರೀವಾಜ್ಞೆ ತಂದು ಕಾಯ್ದೆ ರೂಪಿಸಬೇಕು ಎಂದು ದೊರೆಸ್ವಾಮಿ ಆಗ್ರಹಿಸಿದ್ದಾರೆ.
'ಜೈ ಬೋಲೊ ಭಾರತ್ 'ಹೋರಾಟ
‘ಬಡವರಿಗೆ ನಿಗದಿತ ಅವಧಿಯೊಳಗೆ ವಸತಿ ಸೌಲಭ್ಯ ನಿಟ್ಟಿನಲ್ಲಿ ಬೆಂಗಳೂರು ನಗರದ ಸುತ್ತಮುತ್ತ ಹಸಿರು ವಲಯದ ಜಮೀನನ್ನು ವಸತಿಗೆ ನೀಡಬೇಕು. ಆ ಜಮೀನಿನಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಡಬೇಕು. ಎರಡು ತಿಂಗಳೊಳಗೆ ಮನೆ ಹಂಚಿಕೆ ಆಗದಿದ್ದರೆ ದಿಲ್ಲಿಯಲ್ಲಿ ‘ಜೈ ಬೋಲೋ ಭಾರತ್ ಚಳವಳಿ’ ಮಾಡುತ್ತೇವೆ’
-ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ ಹೋರಾಟಗಾರ