ಲೈಂಗಿಕ ಕಿರುಕುಳ ವಿರೋಧಿಸಿದ ಒಂದೇ ಕುಟುಂಬದ 16 ಮಂದಿಯ ಮೇಲೆ ಆ್ಯಸಿಡ್ ದಾಳಿ

ಪಾಟ್ನಾ,ಆ.28: ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಯುವಕರನ್ನು ತಡೆದ ಒಂದೇ ಕುಟುಂಬದ ಹದಿನಾರು ಮಂದಿಯ ಮೇಲೆ ಯುವಕರು ಆ್ಯಸಿಡ್ ಎರಚಿದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರದಂದು ನಂದಕಿಶೋರ್ ಭಗತ್ ಎಂಬವರ ಕುಟುಂಬದ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಗ್ರಾಮದ ಕೆಲವು ಯುವಕರು ಪ್ರಯತ್ನಿಸಿದಾಗ ಕುಟುಂಬ ಸದಸ್ಯರು ಅವರನ್ನು ತಡೆಯಲು ಯತ್ನಿಸಿದರು. ಈ ವೇಳೆ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದು ನಂತರ ಪರಿಸ್ಥಿತಿ ಯಥಾಸ್ಥಿತಿಗೆ ಬಂದಿತ್ತು. ಬುಧವಾರ ಬೆಳಿಗ್ಗೆ ನಂದಕಿಶೋರ್ ಅವರ ಮನೆಗೆ ನುಗ್ಗಿದ ಯುವಕರ ತಂಡ ಅಲ್ಲಿದ್ದವರ ಮೇಲೆ ಆ್ಯಸಿಡ್ ಎರಚಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕುಟುಂಬದ ಎಲ್ಲ ಸದಸ್ಯರ ಮೇಲೂ ಆ್ಯಸಿಡ್ ದಾಳಿ ನಡೆಸಲಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಅವರನ್ನು ಹಜಿಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು 20 ದುಷ್ಕರ್ಮಿಗಳು ಅಕ್ರಮವಾಗಿ ಮನೆಗೆ ನುಗ್ಗಿ ಈ ದಾಳಿ ನಡೆಸಿದ್ದಾರೆ. ಈ ಪೈಕಿ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





