ಛಾಯಾಚಿತ್ರಗ್ರಾಹಕನಿಗೆ ಮನಸ್ಸಿನ ಭಾವನೆ ತಿಳಿಯಲು ಸಾಧ್ಯ: ಡಾ.ವಿಜಯ
ಫೋಕಸ್ ರಾಜು ಛಾಯಾಚಿತ್ರ ಪ್ರದರ್ಶನ -ಸ್ಪೆಕ್ಟ್ರಮ್- ಉದ್ಘಾಟನೆ

ಉಡುಪಿ, ಆ.28: ಫೋಟೋಗ್ರಫಿ ಎಂಬುವುದು ವಿಜ್ಞಾನದಂತೆ. ಅರಿಯಲು ಹಲವು ವಿಷಯಗಳಿವೆ.ಬೆಳಕಿನ ಜತೆಗೆ ನೆರಳನ್ನು ಸಮಪ್ರಮಾಣದಲ್ಲಿ ಸೆರೆಹಿಡುವ ಕಲೆಗಾರಿಕೆ ಇದಾಗಿದೆ. ಮನಸ್ಸಿನ ಭಾವನೆಗಳನ್ನು ರವಿ, ಕವಿಯ ಜೊತೆಗೆ ಒಬ್ಬ ಸಮರ್ಥ ಛಾಯಾಚಿತ್ರಗ್ರಾಹಕನೂ ಕಂಡುಕೊಳ್ಳುತ್ತಾನೆ ಎಂದು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಹೇಳಿದ್ದಾರೆ.
ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಆ.28ರಿಂದ ಸೆ.1ರವರೆಗೆ ಆಯೋಜಿಸಿರುವ ಖ್ಯಾತ ಛಾಯಾಗ್ರಾಹಕ ಫೋಕಸ್ ರಾಘು ಅವರ ಛಾಯಾಚಿತ್ರಗಳ ಪ್ರದರ್ಶನ ಸ್ಪೆಕ್ಟ್ರಮ್‌ನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡು ತಿದ್ದರು.
ಪೋಟೋಗ್ರಫಿ ಎಂದರೆ ವಿಜ್ಞಾನ ಮತ್ತು ಸಮಾಜ. ಮನುಷ್ಯನಿಗೆ ಸಮಯದ ಮೇಲೆ ನಿಯಂತ್ರಣ ಇಲ್ಲ. ಆದರೆ ಪೋಟೋಗ್ರಫಿಯು ಓಡುವ ಕಾಲವನ್ನು ಹಿಡಿದಿಡುತ್ತದೆ.ತಮ್ಮ ಕಲಾನೈಪುಣ್ಯತೆಯಿಂದ ಅತೀ ಸುಂದರವಾದ ಛಾಯಾಚಿತ್ರ ಗಳನ್ನು ತೆಗೆಯುವ ಮೂಲಕ ಫೋಕಸ್ ರಾಘು ಅವರು ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಶುಭ ಹಾರೈಸಿದರು.
ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಮಾತನಾಡಿ, ಫೋಕಸ್ ರಾಘು ಅವರ ಚಿತ್ರಗಳು ಬ್ರಾಂಡ್ ವೌಲ್ಯ ಹೊಂದಿವೆ. ಅರಣ್ಯ, ಪರಿಸರ, ಸಂಸ್ಕೃತಿಯ ಸೊಬಗನ್ನು ಫೋಟೋಗ್ರಫಿಯಲ್ಲಿ ನಾಜೂಕುತನದಿಂದ ಸೆರೆಹಿಡಿಯುವ ಮೂಲಕ ಅವರು ಮಾದರಿಯಾಗಿದ್ದಾರೆ. ಫೋಟೋಗ್ರಫಿಯಲ್ಲಿ ಕೆಮರಾಕ್ಕಿಂತಲೂ ಅದರ ಹಿಂದಿರುವ ಕಣ್ಣುಗಳು, ಅದರ ಹಿಂದಿರುವ ಛಾಯಾಚಿತ್ರಗ್ರಾಹಕನ ಮೆದುಳು ಅಪಾರ ಪಾತ್ರ ವಹಿಸುತ್ತದೆ. ತಾಳ್ಮೆ, ಶಿಸ್ತು, ಶ್ರದ್ಧೆಯಿಂದ ಎಲ್ಲವೂ ಸಾಧ್ಯ ಎಂಬುವುದನ್ನು ಪೋಕಸ್ ರಾಘು ಅವರು ತೋರಿಸಿಕೊಟ್ಟಿದ್ದಾರೆ ಎಂದರು.
ಛಾಯಾಚಿತ್ರಗ್ರಹಣ ತರಬೇತುದಾರ ಗುರುದತ್ ಕಾಮತ್ ಮಾತನಾಡಿ, ಛಾಯಾಚಿತ್ರಗ್ರಾಹಕರು ತಮ್ಮದೇ ಆದ ಶೈಲಿಯನ್ನು ಬೆಳೆಸಿಕೊಳ್ಳಬೇಕು. ಕಪ್ಪು ಬಿಳುಪು, ಕಲರ್, ಡಿಜಿಟಲ್ ಛಾಯಾಚಿತ್ರಗ್ರಹಣಕ್ಕೆ ಭಿನ್ನತೆ ಇದೆ. ಛಾಯಾಚಿತ್ರ ಗ್ರಹಣದ ಬಗ್ಗೆ ಆಸಕ್ತಿ ಇರುವವರು ದಿನದ ಕನಿಷ್ಠ ಎರಡು ಗಂಟೆಯನ್ನು ಕೆಮರಾ ದೊಂದಿಗೆ ಕಳೆಯಬೇಕು ಎಂದು ಹೇಳಿದರು.
ಛಾಯಾಗ್ರಾಹಕ ಪೋಕಸ್ ರಾಘು ಅವರ ತಾಯಿ ರತ್ನಾವತಿ ಸೆ.1ರವರೆಗೆ ನಡೆಯುವ ಪ್ರದರ್ಶನವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿಕಾನ್ ಇಂಡಿಯಾದ ಆರ್‌ಎಸ್‌ಎಂ ರಾಜಶೇಖರ್ ಎನ್. ಹಾಗೂ ಉದ್ಯಮಿ ಎಂ.ಹರಿಶ್ಚಂದ್ರ ಉಪಸ್ಥಿತರಿದ್ದರು.
ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ ಕಾಮತ್ ಸ್ವಾಗತಿಸಿ, ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.







