ಬಿಜೆಪಿ ಸರಕಾರ 'ಆಪರೇಷನ್ ಕಮಲ'ದ ಅನೈತಿಕ ಕೂಸು: ಸಿದ್ದರಾಮಯ್ಯ
"ಯಾವ ಕ್ಷಣದಲ್ಲಾದರೂ ಮಧ್ಯಂತರ ಚುನಾವಣೆ ಬರಬಹುದು"

ಬೆಂಗಳೂರು, ಆ.28: ರಾಜ್ಯ ಬಿಜೆಪಿ ಸರಕಾರ ‘ಆಪರೇಷನ್ ಕಮಲದ ಅನೈತಿಕ ಕೂಸು’. ಹಣ, ಆಮಿಷ, ಒತ್ತಡ ತಂತ್ರ ಉಪಯೋಗಿಸಿ ಶಾಸಕರನ್ನು ಕೊಂಡು, ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿರುವ ಯಡಿಯೂರಪ್ಪ ಸರಕಾರಕ್ಕೆ ಸ್ಪಷ್ಟ ಜನಾದೇಶವಿಲ್ಲ. ಈ ಸರಕಾರ ಯಾವ ಕ್ಷಣದಲ್ಲಾದರೂ ಬಿದ್ದು, ಮಧ್ಯಂತರ ಚುನಾವಣೆ ಬರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನಾವೀಗ ಅಧಿಕೃತ ವಿರೋಧ ಪಕ್ಷದ ಸ್ಥಾನದಲ್ಲಿದ್ದೇವೆ. ನಮ್ಮ ವಿರೋಧಿ ಕೋಮುವಾದಿ ಬಿಜೆಪಿ ಪಕ್ಷವೇ ಹೊರತು ಜೆಡಿಎಸ್ ಅಲ್ಲ. ನಾವ್ಯಾರು ಜೆಡಿಎಸ್ ಪಕ್ಷದವರ ಮೇಲೆ ಹಗೆ ಸಾಧಿಸುತ್ತಿಲ್ಲ. ಜಾತ್ಯತೀತ ಶಕ್ತಿಗೆ ಕೋಮುವಾದಿ ಶಕ್ತಿ ವಿರೋಧಿಯಾಗಿರುತ್ತದೆಯೇ ಹೊರತು, ಇನ್ನೊಂದು ಜಾತ್ಯತೀತ ಶಕ್ತಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಗೋಕಾಕ್, ಕಾಗವಾಡ ಮತ್ತು ಅಥಣಿ ಉಪ ಚುನಾವಣೆಗೆ ಸಂಬಂಧಿಸಿದಂತೆ ನಮ್ಮ ಪಕ್ಷದಿಂದ ವೀಕ್ಷಕರನ್ನು ನೇಮಿಸಲಾಗಿದೆ. ಅವರು ಈ ಕ್ಷೇತ್ರಗಳ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ, ಅವರ ಅಭಿಪ್ರಾಯ ಸಂಗ್ರಹಿಸಿ ನಮಗೆ ವರದಿ ಸಲ್ಲಿಸುತ್ತಾರೆ. ಆ ವರದಿಯ ಆಧಾರದ ಮೇಲೆ ನಾವು ನಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಭಾವನಾತ್ಮಕ ವಿಚಾರಗಳ ಮೇಲೆಯೇ ರಾಜಕಾರಣ ಮಾಡುತ್ತಾ ಹೋದರೆ ಜನರ ನೈಜ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಅನಕ್ಷರತೆ, ಹಸಿವು ಇವುಗಳನ್ನು ಬಗೆಹರಿಸುವವರಾರು? ಜನರ ಅನುಕಂಪ ಗಳಿಸುವುದು, ಪ್ರಚಾರ ಪಡೆಯುವುದು, ಭಾವನಾತ್ಮಕವಾಗಿ ಮರುಳು ಮಾಡುವುದು ಸರಕಾರದ ಕರ್ತವ್ಯವಲ್ಲ, ದುರಂತವೆಂದರೆ ಕೇಂದ್ರ ಸರಕಾರ ಇದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.
ನಮ್ಮದು ಹೈಕಮಾಂಡ್ ಪಕ್ಷ ಅಲ್ಲ ಅಂದಿದ್ದ ಬಿಜೆಪಿ ನಾಯಕರು ಈಗ ಮಾಡುತ್ತಿರುವುದು ಏನು? ವಾರದಲ್ಲಿ ಮೂರು ದಿನ ದಿಲ್ಲಿಗೆ ಓಡಿ ಹೋಗುತ್ತಿದ್ದಾರೆ. ಅಮಿತ್ ಶಾ ಅನುಮತಿಯಿಲ್ಲದೆ ಯಡಿಯೂರಪ್ಪನವರು ಏನು ಮಾಡದಂತಹ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಪ್ರತಿಯೊಂದಕ್ಕೂ ಹೈಕಮಾಂಡ್ ಒಪ್ಪಿಗೆ ಪಡೆಯಬೇಕಾಗಿದೆ. ಇದೇ ಬಿಜೆಪಿಗರ ನಿಜಬಣ್ಣ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.







