ಮೋದಿ ಹೊಗಳಿಕೆಗಾಗಿ ತರೂರ್ ವಿವರಣೆ ಕೇಳಿದ ಕೇರಳ ಕಾಂಗ್ರೆಸ್

ತಿರುವನಂತಪುರ,ಆ.28: ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಕ್ಕಾಗಿ ಪಕ್ಷದ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್ ಅವರಿಂದ ವಿವರಣೆಯನ್ನು ಕೇಳಿದೆ. ಸರಿಯಾದ ಕೆಲಸಗಳನ್ನು ಮಾಡುತ್ತಿರುವುದಕ್ಕಾಗಿ ಮೋದಿಯವರನ್ನು ಪ್ರಶಂಸಿಸಬೇಕು ಎಂಬ ತರೂರ್ ಹೇಳಿಕೆ ರಾಜ್ಯದಲ್ಲಿ ವಿವಾದವನ್ನು ಸೃಷ್ಟಿಸಿತ್ತು.
ಪಕ್ಷದ ವೇದಿಕೆಯಲ್ಲಿ ಮೋದಿ ಕುರಿತ ಹೇಳಿಕೆಯನ್ನು ಪ್ರಸ್ತಾಪಿಸುವ ಬದಲು ಸಾರ್ವಜನಿಕವಾಗಿ ಅದನ್ನು ಹೇಳಿದ್ದೇಕೆ ಎಂಬ ಬಗ್ಗೆ ತರೂರ್ ಅವರಿಂದ ವಿವರಣೆಯನ್ನು ಕೇಳಲು ಪಕ್ಷವು ನಿರ್ಧರಿಸಿದೆ ಎಂದು ಕೆಪಿಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ರಾಜೀವ ಗಾಂಧಿ ಅವರ 75ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಮೋದಿಯವರ ಕುರಿತು ಕಾಂಗ್ರೆಸ್ ನಿಲುವನ್ನು ಪಕ್ಷದ ಅಧ್ಯಕ್ಷರು ವಿವರಿಸಿದ್ದರು ಎಂದು ತಿಳಿಸಿರುವ ಹೇಳಿಕೆಯು,ಮೋದಿ ಸರಕಾರವು ಎಲ್ಲ ಕ್ಷೇತ್ರಗಳಲ್ಲಿ ವಿಫಲಗೊಂಡಿದೆ. ದೇಶವು ಸ್ವಾತಂತ್ರಾನಂತರದ ಅತ್ಯಂತ ಕೆಟ್ಟ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ ಎಂದು ನೀತಿ ಆಯೋಗದ ಅಧ್ಯಕ್ಷರೂ ಹೇಳಿದ್ದಾರೆ. ನಿರುದ್ಯೋಗ ಸಮಸ್ಯೆಯು ಕಳೆದ 45 ವರ್ಷಗಳಲ್ಲಿಯೇ ಅತ್ಯಂತ ಗಂಭೀರವಾಗಿದೆ ಎಂದು ರಾಷ್ಟ್ರೀಯ ಮಾದರಿ ಸರ್ವೆ ಸಂಸ್ಥೆಯು ಹೇಳಿದೆ. ದೇಶವು ಇಂತಹ ಸಂಕಷ್ಟದಲ್ಲಿರುವಾಗ ಪ್ರಧಾನಿಯವರನ್ನು ಸಮರ್ಥಿಸಿಕೊಂಡಿರುವುದು ದುರದೃಷ್ಟಕರವಾಗಿದೆ ಎಂದಿದೆ.
ತರೂರ್ ಅವರ ನಿಲುವು ಪಕ್ಷದ ಲಕ್ಷಾಂತರ ಕಾರ್ಯಕರ್ತರನ್ನು ನೋಯಿಸಿದೆ ಮತ್ತು ಅದರಿಂದ ಪಕ್ಷಕ್ಕೇನೂ ಸಹಾಯವಾಗುವುದಿಲ್ಲ ಎಂದು ಹೇಳಿದ ಕೆಪಿಸಿಸಿ ಅಧ್ಯಕ್ಷ ಎಂ.ರಾಮಚಂದ್ರನ್ ಅವರು,ಇದು ಪಕ್ಷದ ಘನತೆ ಮತ್ತು ಶಿಸ್ತಿಗೆ ಹಾನಿಕರವಾಗಿದೆ ಎಂದರು. ತರೂರ್ ಈ ಬಗ್ಗೆ ತಕ್ಷಣವೇ ವಿವರಣೆ ನೀಡಬೇಕೆಂದು ಅವರು ಆಗ್ರಹಿಸಿದರು.







