ಪ್ಲಾಸ್ಟಿಕ್ ಬಳಕೆದಾರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅಧಿಕಾರಗಳ ಮೇಲೆ ಕ್ರಮ: ಡಾ.ಕೆ.ಸುಧಾಕರ್
ಬೆಂಗಳೂರು, ಆ.28: ನಿಷೇಧಿತ ಪ್ಲಾಸ್ಟಿಕ್ ಅನ್ನು ಈಗಲೂ ಬಳಸುತ್ತಿರುವ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಸ್ಥಳೀಯ ಝೋನಲ್ ಆರೋಗ್ಯಾಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಸೋಮವಾರ ಸದಾಶಿವನಗರದಲ್ಲಿರುವ ಗೋದರೇಜ್ ನೇಚರ್ ಬ್ಯಾಸ್ಕೆಟ್, ನಾಮ್ದಾರಿ ಫ್ರೆಶ್, ಬ್ರಿಗೇಡ್ ರಸ್ತೆಯಲ್ಲಿರುವ ನೀಲಗಿರಿ ಶಾಪಿಂಗ್ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿದ ಸುಧಾಕರ್, ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.
ಅನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದೇಶದೆಲ್ಲೆಡೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಆದರೂ ಬಹುತೇಕ ಕಡೆ ಬಳಕೆ ಈಗಲೂ ಚಾಲ್ತಿಯಲ್ಲಿದೆ. ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಆಂದೋಲನ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಇಂದು ಕೆಲ ಸಂಘಟಿತ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎಂದರು.
ಪ್ರತಿಷ್ಠಿತ ಕಂಪನಿ ನಡೆಸುವ ಶಾಪಿಂಗ್ ಕೇಂದ್ರದಲ್ಲಿ ಹಣ್ಣುಗಳು, ತರಕಾರಿಗಳನ್ನು ಗ್ರಾಹಕರಿಗೆ ಕೊಡಲು ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಬಹುತೇಕ ಇಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗಿದೆ. ಈ ಮಳಿಗೆಗಳ ಮೇಲೆ ಕ್ರಮಕ್ಕೆ ಸೂಚಿಸಿದ್ದೇನೆ. ಆಗಾಗ ಇಂಥ ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುವಂತೆ ಬಿಬಿಎಂಪಿ ಆರೋಗ್ಯಾಧಿಕಾರಿ ಅವರಿಗೂ ಸೂಚನೆ ನೀಡಿದ್ದೇನೆ ಎಂದರು.
ಅಂಗಡಿಯ ಲೈಸನ್ಸ್ ರದ್ದು ಮಾಡುವ ಅಧಿಕಾರ ಆರೋಗ್ಯಾಧಿಕಾರಿಗಳಿಗೆ ಇದೆ. ಜೊತೆಗೆ ಅಂಗಡಿ ಮಾಲಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು. ಆದರೆ, ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸದಿದ್ದರೆ ಅವರ ಮೇಲೆ ಕ್ರಮ ಜರುಗಿಸುವ ಅಧಿಕಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಇದೆ ಎಂದು ಹೇಳಿದರು.
ಇಂದು ದಾಳಿ ನಡೆಸಿದ ಮಾದರಿಯಲ್ಲೇ ಮುಂದಿನ ದಿನಗಳಲ್ಲಿ ಶಾಪಿಂಗ್ ಮಾಲ್‌ನಂತಹ ಸಂಘಟಿತ ಮಳಿಗೆಗಳ ಮೇಲೆ ದಾಳಿ ಮಾಡಿ ಪರಿಶೀಲಿಸಲಾಗುವುದು. ಇದರ ಜೊತೆಗೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆಯೂ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.