ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ: ಆರೋಪಿಗಳು ದೋಷಮುಕ್ತ
ಮಂಗಳೂರು, ಆ.28: ಐಸಿಸಿ ವಿಶ್ವಕಪ್ ಸಂದರ್ಭ ನಡೆದಿದೆ ಎನ್ನಲಾದ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣವೊಂದರ ವಿಚಾರಣೆ ನಡೆಸಿದ ಬೆಂಗಳೂರು ಹೈಕೋರ್ಟ್‌ನ ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ಪೀಠ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ ಕರುಣಾಕರ (47), ಕುಲಶೇಖರ ನಿವಾಸಿ ಉದಯ್ (40), ಪಾಂಡೇಶ್ವರ ನಿವಾಸಿ ರವಿರಾಜ್ (35) ಪ್ರಕರಣದಿಂದ ಖುಲಾಸೆಗೊಂಡವರು.
2019ರ ಜೂನ್ 24ರಂದು ಮಂಗಳೂರು ಸಿಸಿಬಿ ಪಿಎಸ್ಸೈ ಕಬ್ಬಾಳ್‌ರಾಜ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದರು. ಅಲ್ಲದೆ, 51.73 ಲಕ್ಷ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ, ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಆದರೆ, ಪೊಲೀಸರು ಸೂಕ್ತ ಸಾಕ್ಷಾಧಾರ ಒದಗಿಸುವಲ್ಲಿ ವಿಫಲರಾದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಪಿ.ಎಸ್. ದಿನೇಶ್‌ಕುಮಾರ್ ನೇತೃತ್ವದ ನ್ಯಾಯಪೀಠ ಅರ್ಜಿದಾರರ ವಾದವನ್ನು ಪುರಸ್ಕರಿಸಿತು. ಅಲ್ಲದೆ, ಅರ್ಜಿದಾರರ ವಿರುದ್ಧ ದಾಖಲಾದ ದೂರು ರದ್ದುಗೊಳಿಸುವುದು ಹಾಗೂ ಜಪ್ತಿ ಮಾಡಿದ 51.73 ಲಕ್ಷ ನಗದು ಹಿಂದಿರುಗಿಸಲು ಆದೇಶಿಸಿದ್ದಾರೆ.
ಅರ್ಜಿದಾರರ ಪರ ನ್ಯಾಯವಾದಿ ಆಕಾಶ್ ಬಿ. ಶೆಟ್ಟಿ ವಾದಿಸಿದ್ದರು.





