ಕಾಶ್ಮೀರ ಭಾರತದ ಆಂತರಿಕ ವಿಷಯ: ರಶ್ಯ

ಮಾಸ್ಕೋ, ಆ. 28: ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನ ಇನ್ನೊಂದು ಹಿನ್ನಡೆ ಅನುಭವಿಸಿದ್ದು, ಕಾಶ್ಮೀರ ಭಾರತದ ಆಂತರಿಕ ವಿಷಯವಾಗಿದೆ ಹಾಗೂ ಭಾರತ ಮತ್ತು ಪಾಕಿಸ್ತಾನಗಳು ವಿವಾದವನ್ನು ದ್ವಿಪಕ್ಷೀಯವಾಗಿ ಪರಿಹರಿಸುವ ಅಗತ್ಯವಿದೆ ಎಂದು ರಶ್ಯ ಬುಧವಾರ ಹೇಳಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಭಾರತ ರದ್ದುಪಡಿಸಿದ ಬಳಿಕ, ಕಾಶ್ಮೀರ ವಿಷಯದಲ್ಲಿ ಅಂತರ್‌ರಾಷ್ಟ್ರೀಯ ಬೆಂಬಲವನ್ನು ಪಡೆಯಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಆದರೆ, ಅದು ತನ್ನ ಪ್ರಯತ್ನದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಿಲ್ಲ.
‘‘ಇದು ಭಾರತ ಸರಕಾರದ ಸಾರ್ವಭೌಮ ನಿರ್ಧಾರವಾಗಿದೆ. ಅದು ಭಾರತದ ಆಂತರಿಕ ವಿಷಯವಾಗಿದೆ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಎಲ್ಲ ವಿವಾದಗಳನ್ನು ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಗಳ ಆಧಾರದಲ್ಲಿ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬೇಕಾಗಿದೆ’’ ಎಂದು ಭಾರತಕ್ಕೆ ರಶ್ಯದ ರಾಯಭಾರಿ ನಿಕೊಲಾಯ್ ಕುಡಶೆವ್ ಹೇಳಿದ್ದಾರೆ.
‘‘ಈ ವಿಷಯದಲ್ಲಿ ನಮ್ಮ ದೇಶಕ್ಕೆ ಯಾವುದೇ ಪಾತ್ರವಿಲ್ಲ’’ ಎಂದು ಭಾರತದಲ್ಲಿರುವ ರಶ್ಯ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ರೋಮನ್ ಬಬುಶ್ಕಿನ್ ಹೇಳಿದರು.
‘‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಮುಚ್ಚಿದ ಬಾಗಿಲ ಮಾತುಕತೆಯಲ್ಲಿ, ಕಾಶ್ಮೀರವು ಭಾರತದ ಆಂತರಿಕ ವಿಷಯವಾಗಿದೆ ಎಂಬುದನ್ನು ನಾವು ಪುನರುಚ್ಚರಿಸಿದ್ದೇವೆ’’ ಎಂದರು.







