ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಂದ ‘ಶಗುನ್’ ಶಿಕ್ಷಣ ಪೋರ್ಟಲ್ ಲೋಕಾರ್ಪಣೆ
ಹೊಸದಿಲ್ಲಿ, ಆ. 28: ಶಾಲಾ ಶಿಕ್ಷಣದ ಬಗ್ಗೆ ಎಲ್ಲ ಮಾಹಿತಿಗಳನ್ನು ನೀಡುವ ದೇಶಾದ್ಯಂತದ 15 ಲಕ್ಷಕ್ಕೂ ಅಧಿಕ ಶಾಲೆಗಳ ನಡುವೆ ಸಂಪರ್ಕ ಕಲ್ಪಿಸುವ ವೆಬ್ ಪೋರ್ಟಲ್ ‘ಶಗುನ್’ ಅನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಬುಧವಾರ ಲೋಕಾರ್ಪಣೆಗೊಳಿಸಿದರು.
ಜಿಯೋ ಟ್ಯಾಗ್ ಹೊಂದಿರುವ ಶಾಲೆಗಳು ಹಾಗೂ ಅವು ನೀಡುವ ಎಲ್ಲ ದತ್ತಾಂಶಗಳನ್ನು ಈ ಪೋರ್ಟಲ್‌ನಿಂದ ಪಡೆದುಕೊಳ್ಳಬಹುದು. ‘‘ದೇಶದ ಪ್ರಗತಿ ಶಿಕ್ಷಣವನ್ನು ಅವಲಂಬಿಸಿದೆ. ಶಿಕ್ಷಣದ ತಳಪಾಯ ಗಟ್ಟಿಯಾಗಿರಬೇಕಾಗದ ಅಗತ್ಯ ಇದೆ. ಶಗುನ್ ಪ್ರಮುಖ ಉಪಕ್ರಮ. ಈ ಪೋರ್ಟಲ್ ಮೂಲಕ 2.3 ಲಕ್ಷಕ್ಕಿಂತಲೂ ಅಧಿಕ ಶಿಕ್ಷಣ ವೆಬ್‌ಸೈಟ್‌ಗಳನ್ನು ಸಂಯೋಜಿಸಲು ಸಾಧ್ಯ’’ ಎಂದು ಸಚಿವರು ತಿಳಿಸಿದ್ದಾರೆ.
ಶಾಲೆಗಳು ನೀಡುವ ಮಾಹಿತಿ ಮೂರನೇ ವ್ಯಕ್ತಿಯಿಂದ ಪರಿಶೀಲನೆ ನಡೆಯಲಿದೆ. ಅಲ್ಲದೆ 1,200 ಕೇಂದ್ರೀಯ ವಿದ್ಯಾಲಯಗಳು, 600 ನವೋದಯ ವಿದ್ಯಾಲಯಗಳು, 18,000 ಸಿಬಿಎಸ್‌ಇ ಸಂಯೋಜಿತ ಶಾಲೆಗಳು, 30 ಎಸ್‌ಸಿಇಆರ್‌ಟಿಗಳು, 19,000 ಎನ್‌ಸಿಟಿಇ ಸಂಯೋಜಿತ ಸಂಸ್ಥೆಗಳು ಈ ವೆಬ್ ಪೋರ್ಟಲ್‌ನಲ್ಲಿ ಒಳಗೊಳ್ಳಲಿದೆ ಎಂದು ಮಾನವ ಸಂಪನ್ಮೂಲ ಅಧಿಕಾರಿಗಳು ತಿಳಿಸಿದ್ದಾರೆ.







